ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಫುಟ್‌ಬಾಲ್ ದಿಗ್ಗಜ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ಹಲವು ನಗರಗಳಲ್ಲಿ ಫುಟ್‌ಬಾಲ್ ಪಂದ್ಯ ಆಡಿದ್ದರು. ಈ ಹಂತದಲ್ಲಿ ಅವರು ಮುಂಬೈಗೂ ಭೇಟಿ ನೀಡಿದ್ದರು.
ಈ ವೇಳೆ ಮೆಸ್ಸಿ ಸ್ವಾಗತ ಮಾಡುವಾಗ ಗಣಪತಿ ಬಪ್ಪಾ ಮೋರಿಯಾ ಎಂದು ನಿರೂಪಕ ಎರಡು ಬಾರಿ ಘೋಷಣೆ ಕೂಗಿದ್ದರು. ಈಗ ಇದೇ ವಿಚಾರದ ಬಗ್ಗೆ ನಟ ಕಿಶೋರ್ ಮಹಾ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪ ಮಾಡುವ ಕೆಲಸ ಬೇಕಿತ್ತೇ ಎಂದು ಕೇಳಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಇಡೀ ಸರ್ಕಾರದ ಪ್ರಮುಖ ಮಂತ್ರಿಗಳು ಹಾಗೂ ಅಧಿಕಾರಿಗಳು ಇದ್ದರು. ಈ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇದ್ದಿರಲಿಲ್ಲ. ಮೆಸ್ಸಿ ಮೆಸ್ಸಿ ಎಂದು ಜನ ಕೂಗುತ್ತಿದ್ದರು. ಈ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಾವೂ ಸಹ, ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆ ಕೂಗಿದರು. ಈ ಬಗ್ಗೆ ಕಿಶೋರ್ ಟೀಕೆ ಮಾಡಿದ್ದಾರೆ.
‘ದೇವರ ಹೆಸರಲ್ಲಿ ಮೂರ್ಖರಾಗಿಸುವ, ಮೂರ್ಖರಾಗುವ ಮತ್ತು ಬಾಯಿ ಮುಚ್ಚಿಸುವ, ಬಾಯಿ ಮುಚ್ಚಿಕೊಳ್ಳುವ ರಾಜಕೀಯದ ಸೂಪರ್ ನಿದರ್ಶನ. ಒಬ್ಬ ಮುಖ್ಯಮಂತ್ರಿಯ ವಿರುದ್ಧವೇ ತಿರುಗಿ ಬೀಳುವ ಧೈರ್ಯ ಮಾಡಿದ ಜನರ ದನಿ ಬಿಜೆಪಿ ಟ್ರೇಡ್ ಮಾರ್ಕ್. ಡೈವರ್ಟ್ ಪಾಲಿಟಿಕ್ಸ್ ಗೆ ಬಲಿಯಾಗಿ ಕ್ಷಣದಲ್ಲಿ ಸದ್ದಡಗಿದ್ದು ನಮ್ಮ ದೇಶದ ಇಂದಿನ ಮುಂದಿನ ದುರಂತಕ್ಕೆ ಹಿಡಿದ ಕನ್ನಡಿ.. ಇನ್ನೂ ಸಾಕ್ಷಿ ಬೇಕಿದ್ದರೆ ಕಳೆದ ದಶಕದ ದೇಶದ ವಿದ್ಯಮಾನಗಳನ್ನು ಗಮನಿಸಿ ಪ್ಲೀಸ್’ ಎಂದು ಅವರು ಬರೆದುಕೊಂಡಿದ್ದಾರೆ.

