ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ರಾಜಕೀಯದಲ್ಲಿ ಈಗ ‘ಇಂಧನ’ ಕಿಚ್ಚು ಹತ್ತಿಕೊಂಡಿದೆ. ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮೇಲಿನ ಶಿಸ್ತು ಕ್ರಮದ ವಿಚಾರ ಈಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಮಾತಿನವರೆಗೂ ಬಂದು ನಿಂತಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಹಲವು ದೂರುಗಳು ಕೇಳಿಬಂದಿದ್ದವು. ಈ ಕುರಿತು ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿಗಳ ಕಚೇರಿಯಿಂದ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಿಎಂ ಕಚೇರಿಯ ಸೂಚನೆಯನ್ನೇ ನಿರ್ಲಕ್ಷಿಸಿದ ಪಾಂಡೆ ಅವರು ಭೇಟಿಗೆ ಬಾರದೆ ಗೈರಾಗಿದ್ದರು ಎನ್ನಲಾಗಿದೆ. ಸರ್ಕಾರದ ಉನ್ನತ ಮಟ್ಟದ ಸೂಚನೆಯನ್ನು ಕಡೆಗಣಿಸಿದ ಅಧಿಕಾರಿಯ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪಾಂಡೆ ಅವರಿಗೆ ‘ಶೋಕಾಸ್ ನೋಟಿಸ್’ ಜಾರಿ ಮಾಡಿದ್ದರು.
ತಮ್ಮ ಇಲಾಖೆಯ ಅಧಿಕಾರಿಗೆ ಈ ರೀತಿ ನೋಟಿಸ್ ನೀಡಿರುವುದು ಸಚಿವ ಕೆ.ಜೆ. ಜಾರ್ಜ್ ಅವರನ್ನು ಕೆರಳಿಸಿದೆ. ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವರ ನಿವಾಸ ‘ಕಾವೇರಿ’ಯಲ್ಲಿ ಭೇಟಿಯಾದ ಜಾರ್ಜ್, ಅಧಿಕಾರಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. “ದಕ್ಷ ಅಧಿಕಾರಿಯ ವಿರುದ್ಧ ಈ ರೀತಿ ಶಿಸ್ತು ಕ್ರಮ ಕೈಗೊಳ್ಳುವುದಾದರೆ, ನಾನು ಸಚಿವ ಸ್ಥಾನದಲ್ಲಿ ಮುಂದುವರಿಯುವ ಅಗತ್ಯವಿಲ್ಲ. ನಾನೇ ರಾಜೀನಾಮೆ ನೀಡುತ್ತೇನೆ” ಎಂದು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.
ಸಚಿವರ ಈ ದಿಢೀರ್ ನಡೆಯಿಂದ ಅಚ್ಚರಿಗೊಂಡ ಸಿಎಂ ಸಿದ್ದರಾಮಯ್ಯ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅಧಿಕಾರಿಯ ವಿರುದ್ಧದ ದೂರುಗಳು ಹಾಗೂ ಆಡಳಿತಾತ್ಮಕ ನಿಯಮಗಳ ಬಗ್ಗೆ ವಿವರಿಸಿ, ಜಾರ್ಜ್ ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ಅಧಿಕಾರಿಯೊಬ್ಬರ ಕಾರಣಕ್ಕೆ ಸಚಿವರು ಮತ್ತು ಸಿಎಂ ಕಚೇರಿಯ ನಡುವೆ ಶೀತಲ ಸಮರ ಶುರುವಾಗಿರುವುದು ಈಗ ರಾಜ್ಯ ರಾಜಕಾರಣದ ಚರ್ಚೆಗೆ ಕಾರಣವಾಗಿದೆ.



