ಹೊಸದಿಗಂತ ಬೀದರ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಸಾವಿರ ದಿನಗಳ ಸಂಭ್ರಮದಲ್ಲಿದ್ದರೆ, ಇತ್ತ ಗೃಹಜ್ಯೋತಿ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಹಂಚಿಕೆಯ ಚರ್ಚೆಗಳ ನಡುವೆ ಹಾವೇರಿಯಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದೆ. ಆದರೆ, ಗ್ರಾಹಕರಿಗೆ ಮಾತ್ರ ಎಸ್ಕಾಂಗಳು ನೀಡುತ್ತಿರುವ ವಿದ್ಯುತ್ ಬಿಲ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಬೀದರ್ ಜಿಲ್ಲೆಯಾದ್ಯಂತ ಸಾವಿರಾರು ಗ್ರಾಹಕರು ಬಿಲ್ ಮೊತ್ತ ಕಂಡು ಕಂಗೆಟ್ಟಿದ್ದಾರೆ. ಉದಾಹರಣೆಗೆ, ಕೇವಲ 155 ಯೂನಿಟ್ ಬಳಸಿದ ಗ್ರಾಹಕನಿಗೆ ನಿಯಮದ ಪ್ರಕಾರ ‘ಶೂನ್ಯ ಬಿಲ್’ ಬರಬೇಕಿತ್ತು. ಆದರೆ ಕೈಗೆ ಬಂದಿರುವುದು ಬರೋಬ್ಬರಿ 2200 ರೂಪಾಯಿಗಳ ಬಿಲ್!
ಈ ಬಗ್ಗೆ ಎಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಾರ್ವಜನಿಕರಿಗೆ ಯಾವುದೇ ಸೂಕ್ತ ಉತ್ತರ ಸಿಗುತ್ತಿಲ್ಲ. ಇದು ಕೇವಲ ಒಬ್ಬರ ಸಮಸ್ಯೆಯಲ್ಲ, ಜಿಲ್ಲೆಯ ಸಾವಿರಾರು ನಿವಾಸಿಗಳ ಮಾಸಿಕ ಗೋಳಾಗಿದೆ.
ಈ ಕುರಿತು ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ಗ್ರಾಹಕ ಜಗದೀಶ್ ಎನ್.ಎಮ್ ಅವರು, “ನಾನು ಬೆಂಗಳೂರು ಮತ್ತು ಬೀದರ್ ಎರಡೂ ಕಡೆ ವಾಸವಿದ್ದೇನೆ. ಎರಡೂ ಕಡೆಗಳಲ್ಲಿ ನನ್ನ ವಿದ್ಯುತ್ ಬಳಕೆ 200 ಯೂನಿಟ್‌ಗಿಂತಲೂ ಕಡಿಮೆ ಇದೆ. ಆದರೂ ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳು 2000 ರೂ.ಗಳಿಗೂ ಅಧಿಕ ಬಿಲ್ ಬರುತ್ತಿದೆ. ಗೃಹಜ್ಯೋತಿಗೆ ನೋಂದಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ದೂರು ನೀಡಲು ಹೋದರೆ ಅಧಿಕಾರಿಗಳ ವರ್ತನೆ ಮಾತ್ರ ‘ಬೋಳ್ ಗಡ್ಗಿ ಮ್ಯಾಲ್ ನೀರ್ ಸುರಿದಂತೆ’ (ಬೋರಲು ಹಾಕಿದ ಕೊಡದ ಮೇಲೆ ನೀರು ಸುರಿದಂತೆ) ನಿಸ್ಸಹಾಯಕವಾಗಿದೆ,” ಎಂದು ಕಿಡಿಕಾರಿದ್ದಾರೆ.
ಒಟ್ಟಾರೆಯಾಗಿ, ಸರ್ಕಾರದ 1000 ದಿನಗಳ ಸಾಧನೆ ಎಂದರೆ ಅದು ಸಾರ್ವಜನಿಕರ ಜೇಬಿಗೆ ಹಾಕುತ್ತಿರುವ ಕತ್ತರಿಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.



