ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ರಿಯಲ್ ಲೈಫ್‌ನಲ್ಲಿ ಬಣ್ಣ ಹಚ್ಚಿಲ್ಲ. ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ? ಸೋತಿದ್ದು ಬೇಸರವಾಯಿತು ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಮಾತನಾಡುವಾಗ ಭಯ ಆಗುತ್ತದೆ. ಆದರೂ ಎಲ್ಲವನ್ನೂ ಬಿಟ್ಟುಬಂದು, ನನ್ನ ಹೆಂಡತಿ- ಮಕ್ಕಳನ್ನು ಸಾಕುವ ಶಕ್ತಿ ನನಗಿದೆ. ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರಗಳು ಬರುತ್ತವೆ. ಆದರೆ, ರಾಜಕೀಯ ಆಗಿಲ್ಲ. ಪ್ರತಿಯೊಬ್ಬರಿಗೂ ಆಸೆ ಇರುತ್ತದೆ ಎಂದು ಹೇಳಿದ್ದಾರೆ.
ನಿಮ್ಮೊಂದಿಗೆ ಇದ್ದಿದ್ದೆ ಖುಷಿ ವಿಚಾರ. ಜೀವನ ನಡೆಯಬೇಕು, ಸಾವಿರ ಜನ ಸಾವಿರ ಮಾತನಾಡುತ್ತಾರೆ. ನಮ್ಮ ನಿಯತ್ತು ನಮ್ಮನ್ನು ಕಾಪಾಡುತ್ತದೆ. ನನ್ನ ಜೀವನ ನಾವೇ ರೂಪಿಸಿಕೊಳ್ಳಬೇಕು. ನನ್ನ ಹೆಂಡತಿ ಗೆಲ್ಲಲಿ ಎಂದು ಅಸೆ ಪಟ್ಟಿದ್ದು ತಪ್ಪಾ? ಸೋತಿದ್ದು ಬೇಸರವಾಯಿತು. ಸೋಲೇ ಗೆಲುವಿನ ಮೆಟ್ಟಿಲು, ಹತಾಷರಾಗುವ ಅವಶ್ಯಕತೆ ಇಲ್ಲ. ನಾನು ತಪ್ಪು ಮಾಡಿದರೆ ನನಗೆ ಶಿಕ್ಷೆ ಆಗುತ್ತದೆ. ಮನಸ್ಥಾಪ ತೆಗೆದುಬಿಡಿ, ತಪ್ಪು ದಾರಿಯಿಂದ ಒಳ್ಳೆಯ ದಾರಿಗೆ ಕರೆದುಕೊಂಡು ಬರಬೇಕು. ಸಾವಿರ ಜನ ಸಾವಿರ ಮಾತಾನಾಡಲಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು. ಈ ಕಿವೀಲಿ ಕೇಳಿ, ಆ ಕಿವೀಲಿ ಬಿಡಬೇಕು ಎಂದು ತಿಳಿಸಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಪ್ರಮಾಣದ ಮತಗಳು ಬಂದಿರುವುದು ಇದೇ ಮೊದಲು. ಮತದಾರರೇ ದೇವರು, ಸಹೋದರ ಮಧು ತೀವ್ರ ಶ್ರಮ ಪಟ್ಟಿದ್ದಾರೆ. ಪತಿ ಶಿವರಾಜ್ ಕುಮಾರ್ ಕೂಡ ನನ್ನ ಜತೆಗಿದ್ದರು. ಚುನಾವಣೆ ಮಾತ್ರ ಅಲ್ಲ, ಯಾವಾಗಲೂ ಅವರು ನನ್ನ ಜತೆಗಿರುತ್ತಾರೆ. ಚುನಾವಣೆಯಲ್ಲಿ ಸೋಲಾಗಿದೆ ಎಂದು ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಇಲ್ಲೇ ಇರುತ್ತೇನೆ ಶಕ್ತಿಧಾಮ ಮಾದರಿ ಇಲ್ಲೊಂದು ಪುನರ್ವಸತಿ ಕೇಂದ್ರ ಶುರು ಮಾಡುತ್ತೇವೆ, ಮನೆ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.