ಇಂದಿನ ಆಧುನಿಕ ಜೀವನಶೈಲಿ, ಒತ್ತಡ, ಅಸಮರ್ಪಕ ಆಹಾರ ಪದ್ಧತಿ ಮತ್ತು ಕಡಿಮೆ ಶಾರೀರಿಕ ಚಟುವಟಿಕೆಗಳಿಂದಾಗಿ ಮಧುಮೇಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಸಕ್ಕರೆಯ ಬಳಕೆ ಅತ್ಯಂತ ಹೆಚ್ಚಾಗಿದೆ. ಆದರೆ ಮಧುಮೇಹ ತಪಾಸಣೆಯಾದ ನಂತರ ಹೆಚ್ಚಿನವರು ಮೊದಲೇ ಕೈ ಬಿಡುವುದೇ ಸಕ್ಕರೆ. ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದ ಕಾರಣ ಅನೇಕರು “ಸಕ್ಕರೆಯ ಬದಲು ಬೆಲ್ಲ ಬಳಸಿದರೆ ಅದು ಆರೋಗ್ಯಕರ ಆಯ್ಕೆಯಾಗಬಹುದು” ಎಂದು ಭಾವಿಸುತ್ತಾರೆ. ಬೆಲ್ಲವು ನೈಸರ್ಗಿಕವಾಗಿದ್ದು, ಕಡಿಮೆ ಸಂಸ್ಕರಣೆಯ ಮೂಲಕ ತಯಾರಾಗುತ್ತದೆ ಮತ್ತು ಕೆಲವು ಖನಿಜಗಳನ್ನು ಹೊಂದಿರುತ್ತದೆ ಎಂಬ ಕಾರಣಕ್ಕೆ ಇದು ಹೆಚ್ಚು ಉತ್ತಮ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿ ಕಂಡುಬರುತ್ತದೆ.
ವಾಸ್ತವದಲ್ಲಿ ಸಕ್ಕರೆ ಹಾಗೂ ಬೆಲ್ಲ ಎರಡೂ ಶುಗರ್‌ನ ಮೂಲಗಳೇ ಆಗಿದ್ದು, ದೇಹಕ್ಕೆ ಸಮಾನವಾಗಿ ಕ್ಯಾಲೊರಿಗಳು ಹಾಗೂ ಕಾರ್ಬೋಹೈಡ್ರೇಟ್ ಒದಗಿಸುತ್ತವೆ. ಸಕ್ಕರೆಯ ಗ್ಲೈಸೆಮಿಕ್ ಸೂಚ್ಯಂಕ (GI) ಸುಮಾರು 70-75 ಇರುತ್ತದೆ. ಬೆಲ್ಲದ GI 80-85ರಷ್ಟು ಏರಿಕೆಯಾಗಿದ್ದು, ಇದರಿಂದ ಬೆಲ್ಲವು ಸಕ್ಕರೆಯಿಗಿಂತ ವೇಗವಾಗಿ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ, ಮಧುಮೇಹಿಗಳಿಗೆ ಬೆಲ್ಲವನ್ನು ಸಕ್ಕರೆಯ ಪರ್ಯಾಯವಾಗಿ ಬಳಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ.
ಆದರೆ, ಬೆಲ್ಲದಲ್ಲಿ ಕಬ್ಬಿಣ, ಮೆಗ್ನೀಸಿಯಂ, ಪೊಟ್ಯಾಸಿಯಂ ಮುಂತಾದ ಅಲ್ಪ ಪ್ರಮಾಣದ ಖನಿಜಗಳು ಲಭ್ಯ. ಇದು ದೇಹದ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡಬಹುದು. ಆಯುರ್ವೇದದಲ್ಲಿ ಬೆಲ್ಲವನ್ನು ಜೀರ್ಣಕ್ರಿಯೆಗೆ ಅನುಕೂಲಕರವೆಂದು ವಿವರಿಸಲಾಗಿದೆ. ಆದರೆ ಇದರ ಪ್ರಯೋಜನಗಳಿದ್ದರೂ ಹೆಚ್ಚಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ತೀವ್ರವಾಗಿ ಏರಿಕೆಯಾಗುವ ಅಪಾಯವಿದೆ.
ಆರೋಗ್ಯ ತಜ್ಞರ ಪ್ರಕಾರ, ಸಕ್ಕರೆ ಮತ್ತು ಬೆಲ್ಲ ಎರಡನ್ನೂ ಮಿತವಾಗಿ ಬಳಸುವುದು ಮುಖ್ಯ. ಮಧುಮೇಹಿಗಳು ದಿನಕ್ಕೆ ಗರಿಷ್ಠ 1 ರಿಂದ 2 ಟೀಸ್ಪೂನ್‌ಗಿಂತ ಹೆಚ್ಚು ಬೆಲ್ಲ ಸೇವಿಸಬಾರದು ಎಂದು ಸಲಹೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಬೆಲ್ಲಗಳಲ್ಲಿ ಬಣ್ಣ ಹಾಗೂ ಗಟ್ಟಿಯಾಗಿಸಲು ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುವುದರಿಂದ ನೈಸರ್ಗಿಕ ಕಂದುಬಣ್ಣದ ಬೆಲ್ಲವನ್ನು ಮಾತ್ರ ಆಯ್ಕೆ ಮಾಡುವುದು ಸೂಕ್ತ.
ಬೆಲ್ಲವು ಸಕ್ಕರೆಯಿಗಿಂತ ಉತ್ತಮ ಎಂಬ ಕಲ್ಪನೆ ಸಂಪೂರ್ಣ ಸರಿ ಅಲ್ಲ. ಎರಡೂ ದೇಹಕ್ಕೆ ಶುಗರ್ ನೀಡುವ ಮೂಲವಾಗಿರುವುದರಿಂದ ಮಿತ ಪ್ರಮಾಣದ ಬಳಕೆ ಮಾತ್ರ ಸುರಕ್ಷಿತ. ಮಧುಮೇಹಿಗಳು ಸಿಹಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು, ಜೊತೆಗೆ ಸಮತೋಲನ ಆಹಾರ ಹಾಗೂ ವ್ಯಾಯಾಮ ಪಾಲಿಸುವುದೇ ಆರೋಗ್ಯಕರ ಆಯ್ಕೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)