March 5, 2026
Thursday, March 5, 2026
spot_img

ಕಾರಂಜಾ ಜಲಾಶಯಕ್ಕೆ ಎದುರಾಯಿತೇ ಗಂಡಾಂತರ? ತೆಲಂಗಾಣದ ‘ಕೊತ್ತೂರ್’ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ಸಂಕಷ್ಟ!

ವೆಂಕಟೇಶ್ ಮೊರಖಂಡಿಕರ ಬೀದರ್

ಹೊಸದಿಗಂತ ಬೀದರ್

ಜಿಲ್ಲೆಯ ಬೃಹತ್ ನೀರಾವರಿ ಯೋಜನೆಯಾದ ಕಾರಂಜಾ ಜಲಾಶಯ ಮತ್ತೋಮ್ಮೆ ಸುದ್ದಿಯಲ್ಲಿದೆ. ಸದಾ ಬೃಹತ್ ಪ್ರಮಾಣದ ಭ್ರಷ್ಟಾಚಾರ, ಸಂತ್ರಸ್ತರಿಗೆ ಸಿಗದ ಪರಿಹಾರದ ಕಾರಣದಿಂದಲ್ಲ ಬದಲಾಗಿ ಈ ಬಾರಿ ಸಂಪೂರ್ಣ ಕಾರಂಜಾ ಜಲಾಶಯದ ಮೇಲಿನ ಸುರಕ್ಷತೆಯ ಕಂಟಕದ ಕಾರಣದಿಂದಾಗಿ ಸುದ್ದಿಯಲ್ಲಿದೆ.

1960ರಲ್ಲಿ ಬೀದರ್ ಜಿಲ್ಲೆಯಲ್ಲಿ 13.1 ಟಿಎಂಸಿ ನೀರು ಸಂಗ್ರಹಿಸಲು ಡ್ಯಾಮ್ ನಿರ್ಮಿಸುವ ಸಲುವಾಗಿ ಪ್ರಾಥಮಿಕ ಸರ್ವೇ ಮಾಡಲಾಗಿತ್ತು. ಒಟ್ಟು 9.9 ಕೋಟಿ ಅನುದಾನದಲ್ಲಿ ಈ ನೀರಾವರಿ ಯೋಜನೆಗೆ ಪೂರ್ಣಗೊಳಿಸುವ ಅಂದಾಜಿನೊಂದಿಗೆ 27 ನವೆಂಬರ್1969ರಂದು ಮಂಜೂರಾತಿ ನೀಡಲಾಗಿತ್ತು. ಆದರೆ ಯೋಜನೆಗೆ ಸಂಬಂಧಿಸಿದಂತೆ ರೂಪುರೇಷೆಗಳಲ್ಲಿ ಸತತ ಬದಲಾವಣೆಗಳಾದವು. ೧೯೭೨ರಲ್ಲಿ ಯೋಜನೆ ಆರಂಭಗೊಂಡಾಗ ಈ ಯೋಜನೆಗೆ ಬೇಕಾಗುವ ಅನುದಾನ ೧೮ಕೋಟಿಗೆ ತಲುಪಿತ್ತು. 1974ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜೆ. ಬೆಂಗಲ್ ರಾವ್ ಜಂಟಿಯಾಗಿ ಈ ಯೋಜನೆಯ ಶಿಲಾನ್ಯಾಸ ನೆರವೇರಿಸಿದ್ದರು. ಇದಾದ ಒಂದು ವರ್ಷದ ನಂತರ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರ ಈ ಯೋಜನೆಯಡಿ 13.1 ಟಿಎಂಸಿ ನೀರು ಸಂಗ್ರಹದ ಗುರಿ ನಿರ್ಧರಿಸಲಾಗಿತ್ತು. ಸೆಂಟ್ರಲ್ ವಾಟರ್ ಕಮಿಷನ್ ಸತತವಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತರಲು ನಿರ್ದೇಶಿಸಿತ್ತು. ಅದರಂತೆ CWC ನಿರ್ದೇಶನದಂತೆ ಬದಲಾವಣೆಗಳನ್ನು ಮಾಡಿದ ನಂತರವೂ ಈ ಯೋಜನೆಗೆ ಮಂಜೂರಾತಿ ಸಿಕ್ಕಿರಲಿಲ್ಲ. ಕೊನೆಗೆ ಒಟ್ಟು ೧೦.೦೯ ಟಿಎಂಸಿ ನೀರನ್ನು ಶೇಖರಣೆ ಮಾಡಲು ೩ನೇ ಆಗಸ್ಟ್ 1992ರಂದು CWC ಮಂಜೂರಾತಿ ನೀಡಿತ್ತು. ಕಾರಂಜಾ ಯೋಜನೆಯ ಒಟ್ಟು ಕ್ಯಾಚಮೆಂಟ್ ಏರಿಯಾ ಒಟ್ಟು 782 ಸ್ಕ್ವೇರ್ ಮೈಲಿ ಇದೆ, ಇದರಲ್ಲಿ 217 ಸ್ಕ್ವೇರ್ ಮೈಲಿ ಕ್ಷೇತ್ರ ಆಂಧ್ರಪ್ರದೇಶದಲ್ಲಿ (ಈಗಿನ ತೆಲಂಗಾಣದಲ್ಲಿ) ಬರುತ್ತದೆ. ತೆಲಂಗಾಣ ಪ್ರದೇಶದಲ್ಲಿ ಮಳೆಯಾದಾಗ ನಾರಂಜಾ ನದಿಯ ಮುಖಾಂತರ ಮಳೆಯ ನೀರು ಕಾರಂಜಾ ಜಲಾಶಯದಲ್ಲಿ ಸಂಗ್ರಹವಾಗುತ್ತದೆ.

ಕೊತ್ತೂರ್ ಡ್ಯಾಮ್

ತೆಲಂಗಾಣದ ಜಹೀರಾಬಾದ್ ಸಮೀಪ ಕೊತ್ತೂರ್ ಗ್ರಾಮದ ಬಳಿ ನಾರಂಜಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ನ್ನು 1970ರಲ್ಲಿ ನಿರ್ಮಿಸಲಾಗಿತ್ತು. ಈ ಯೋಜನೆಯ ಉದ್ಘಾಟನೆಯನ್ನು 20 ಡಿಸೆಂಬರ್ 1970ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕೆ.ಬ್ರಹ್ಮಾನಂದ ರೆಡ್ಡಿ ನೆರವೇರಿಸಿದ್ದರು. 45 ಲಕ್ಷದ ಅನುದಾನದಲ್ಲಿ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು, ಇದರ ಹೆಸರು ಬ್ರಿಡ್ಜ್ ಕಂ ರೆಗ್ಯುಲೇಟರ್ ಇಡಲಾಗಿತ್ತು, ಈ ಬ್ಯಾರೇಜ್ ಅಡಿ ಒಟ್ಟು 143.80 ಸ್ಕ್ವೇರ್ ಮೈಲಿ ಕ್ಯಾಚಮೆಂಟ್ ಏರಿಯಾ ನಿರ್ಧರಿಸಲಾಗಿತ್ತು. ಒಟ್ಟು 5 ಸಾವಿರ ಎಕ್ಕರೆ ಕೃಷಿ ಜಮೀನಿಗೆ ನೀರು ಪೂರೈಸುವ ಯೋಜನೆಯಾಗಿತ್ತು. ಆದರೆ ಈ ಬ್ಯಾರೇಜ್ ಕಾರಂಜಾ ಜಲಾನಯನ ಪ್ರದೇಶದಲ್ಲಿ ಬರುವ ಕಾರಣದಿಂದಾಗಿ 1975ರಲ್ಲಿ ಕರ್ನಾಟಕ ಹಾಗೂ ಆಗೀನ ಆಂಧ್ರಪ್ರದೇಶ ಸರ್ಕಾರಗಳ ನಡುವೆ ಆದ ಒಪ್ಪಂದದ ಪ್ರಕಾರ ಈ ಬ್ಯಾರೇಜ್ ನ ಗೇಟ್ ಗಳನ್ನು ತೆರೆದು ಉಪಯೋಗವನ್ನು ನಿಲ್ಲಿಸಲಾಗಿತ್ತು. ಈ ಯೋಜನೆಯಲ್ಲಾದ ಖರ್ಚನ್ನು ಆಂಧ್ರಪ್ರದೇಶ ಸರ್ಕಾರ ಈ ಭಾಗದಿಂದ ಹಾದು ಹೋಗುವ ವಾಹನಗಳಿಂದ ಟ್ಯಾಕ್ಸ್ ವಸೂಲಿ ಮಾಡುವ ಮೂಲಕ ಭರ್ತಿ ಮಾಡಿತ್ತು. ಕಳೆದ 45 ವರ್ಷಕ್ಕೂ ಹೆಚ್ಚಿನ ಕಾಲ ಈ ಬ್ಯಾರೇಜ್ ನ ಗೇಟ್ ಗಳನ್ನು ಹಿಂದಿನ ಆಂಧ್ರಪ್ರದೇಶ ಸರ್ಕಾರ ಮುಚ್ಚದೇ ಒಪ್ಪಂದವನ್ನು ಅನುಸರಿಸಿದ್ದವು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊತ್ತೂರ್ ಬ್ಯಾರೇಜ್ ನ ಗೇಟ್ ಗಳನ್ನು ತೆಲಂಗಾಣ ಸರ್ಕಾರ ಮುಚ್ಚಿರುವ ಕಾರಣ ಕಾರಂಜಾ ಜಲಾಶಯದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ನೀರಿನ ಸಂಗ್ರಹ ಆಗುತ್ತಿಲ್ಲ. ಇದಲ್ಲದೇ ಕೊತ್ತೂರ್ ಬ್ಯಾರೇಜ್ ಗೇಟ್ ಮುಚ್ಚಿರುವ ಕಾರಣ ಸುತ್ತಲಿನ ಅನೇಕ ಗದ್ದೆಗಳಲ್ಲಿ ನೀರು ತುಂಬಿ ಬೆಳೆ ಹಾಳಾಗಿತ್ತು.

ನೀರಾವರಿ ವಿಭಾಗದಲ್ಲಿ ಕೆಲಸ ಸಲ್ಲಿಸಲಿರುವ ಅಧಿಕಾರಿಗಳ ಪ್ರಕಾರ ಒಂದು ದೊಡ್ಡ ನೀರಾವರಿ ಯೋಜನೆಯ ಕ್ಯಾಚಮೆಂಟ್ ಏರಿಯಾದಲ್ಲಿ ಇನ್ನೊಂದು ಡ್ಯಾಮ್ ನಿರ್ಮಿಸುವುದು ಅವೈಜ್ಞಾನಿಕ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೊತ್ತೂರ್ ಬ್ಯಾರೇಜ್ 1970ರಲ್ಲಿ ನಿರ್ಮಿಸಲಾಗಿತ್ತು ಈ ವೇಳೆಯ ವರೆಗೆ ಕಾರಂಜಾ ಜಲಾಶಯ ನಿರ್ಮಾಣ ಆಗಿರಲಿಲ್ಲ ಆದರೆ 1975ರಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ ನಡೆದ ಒಪ್ಪಂದದ ನಂತರ ಕೊತ್ತೂರ್ ಬ್ಯಾರೇಜ್ ಗೇಟ್ ಗಳನ್ನು ತೆರೆಯಲಾಗಿತ್ತು , ಆದರೆ ಇತ್ತೀಚಿನ ದಿನಗಳಲ್ಲಿ ಈಗಿನ ತೆಲಂಗಾಣ ಸರ್ಕಾರ ಈ ಬ್ಯಾರೇಜ್ ನ ಗೇಟ್ ಗಳನ್ನು ರಿಪೇರಿ ಮಾಡಿಸಿ ಮುಚ್ಚಿಸಿದೆ, ಇದರಿಂದಾಗಿ ಕಾರಂಜಾ ಜಲಾಶಯಕ್ಕೆ ಅಪಾಯ ಹೆಚ್ಚಾಗಿದೆ. ಈ ಕುರಿತು ಇಲ್ಲಿಯವರೆಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ರಾಜ್ಯ ಸರ್ಕಾರದ ನಿಷ್ಕಾಳಜಿ ಎತ್ತಿ ತೋರಿಸುತ್ತದೆ.

ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ವಿ.ಕೆ.ದೇಶಪಾಂಡೆ ಹೊಸದಿಗಂತಕ್ಕೆ ಮಾತನಾಡಿ ಪ್ರತಿಕ್ರಿಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !