April 13, 2026
Monday, April 13, 2026
spot_img

ತುಮಕೂರಿನಲ್ಲಿ ಭೀಕರ ಅಪಘಾತ: ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಸಾರಿಗೆ ಬಸ್

ಹೊಸದಿಗಂತ ವರದಿ, ತುಮಕೂರು:

ವಿದ್ಯಾರ್ಥಿನಿಯ ಕಾಲಿನ ಮೇಲೆ ಸರಕಾರಿ ಸಾರಿಗೆ ಬಸ್‌ನ ಟೈರ್ ಹರಿದು ಕಾಲು ಮುರಿದಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ.

ತುಮಕೂರಿನಿಂದ ಪಾವಗಡಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ಅಲ್ಲಿದ್ದ ನೂರಾರು ಕಾಲೇಜು ವಿದ್ಯಾರ್ಥಿಗಳು ಸೀಟು ಹಿಡಿಯುವ ತರಾತುರಿಯಲ್ಲಿ ಒಮ್ಮೆಲೇ ಬಸ್‌ನ ಬಾಗಿಲಿನ ಬಳಿ ನುಗ್ಗಿದ್ದಾರೆ. ಈ ನಡುವೆ, ವಿದ್ಯಾರ್ಥಿನಿ ಹರ್ಷಿತ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ಬಸ್ ಚಲಿಸಿದ್ದರಿಂದ ಆಕೆಯ ಕಾಲು ಬಸ್‌ನ ಹಿಂದಿನ ಚಕ್ರದ ಕೆಳಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ.

ತಕ್ಷಣವೇ ಅಲ್ಲಿದ್ದವರು ಮತ್ತು ಬಸ್ ನಿಲ್ದಾಣದ ಸಿಬ್ಬಂದಿ ಗಾಯಾಳು ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಅಪಘಾತದ ಭೀಕರ ದೃಶ್ಯಗಳು ಸೆರೆಯಾಗಿವೆ. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿಗಳು ಮುಗಿಬೀಳುತ್ತಿರುವ ಮತ್ತು ವಿದ್ಯಾರ್ಥಿನಿ ಚಕ್ರದ ಅಡಿಗೆ ಬೀಳುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸಿದೆ.

ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪೊಲೀಸರು, ಅಪಘಾತಕ್ಕೆ ಕಾರಣವಾದ ಕೆಎಸ್‌ಆರ್‌ಟಿಸಿ ಬಸ್ಸನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ. ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳ ನೂಕುನುಗ್ಗಲು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !