ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯುದ್ಧಕ್ಕೆ ಸಜ್ಜಾಗಿದ್ದಾರೆಯೇ?
ಹೀಗೊಂದು ಅನುಮಾನ ಈಗ ದಟ್ಟವಾಗಿ ಕಾಡುತ್ತಿದೆ.
ದಕ್ಷಿಣ ಕೊರಿಯಾ ಮೇಲೆ ಪರಮಾಣು ದಾಳಿ ಬೆದರಿಕೆವೊಡ್ಡಿರುವ ಉನ್, ಈಗ ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಯುದ್ಧಕ್ಕೆ ಸನ್ನದ್ಧವಾಗುವಂತೆ ಮಿಲಿಟರಿ ಶಸ್ತ್ರಾಗಾರವನ್ನು ನಿರ್ಮಿಸಿ ಎಂದು ಆದೇಶಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ.
ಈ ನಡುವೆ ನಮ್ಮ ಮೇಲೆ ಆಕ್ರಮಣ ಮಾಡಲು ಶತ್ರುಗಳು ಹವಣಿಸುತ್ತಿದ್ದಾರೆ. ಕೊರಿಯಾ ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಯುದ್ಧವು ಭುಗಿಲೇಳಬಹುದು ಎಂದು ಕಿಮ್ ಹೇಳಿರುವುದು ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಇದೇ ವೇಳೆ ತನ್ನ ದೇಶದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ನೀತಿ ನಿರ್ಧಾರಗಳನ್ನು ನಿಗದಿಪಡಿಸುವ ಐದು ದಿನಗಳ ಸಭೆಗಳ ಅಂತ್ಯದಲ್ಲಿ ಸುದೀರ್ಘ ಭಾಷಣ ಮಾಡಿದ ಕಿಮ್, ಭಾಷಣದುದ್ದಕ್ಕೂ ಅಮೆರಿಕ ವಿರುದ್ಧ ಕಿಡಿಕಾರಿದ್ದಾರೆ. ಅಮೆರಿಕ, ವಿವಿಧ ರೀತಿಯ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ ಹೀಗಾಗಿ ಉಗ್ರ ಪ್ರಮಾಣದಲ್ಲಿ ಯುದ್ಧ ನಡೆದರೂ ಸಹಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ತನ್ನ ಸಶಸ್ತ್ರ ಪಡೆಗಳಿಗೆ ಅವರು ಆದೇಶಿಸಿದ್ದಾರೆ.
ಉತ್ತರ ಕೊರಿಯಾ 2023ರಲ್ಲಿ ವಿಚಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆಯಲ್ಲದೆ, ಅತ್ಯಾಧುನಿಕ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನೂ ನಡೆಸಿದೆ.