ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯುವ ಹಾಗೂ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಬ್ಯಾಟಿಂಗ್ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಅವರು ದಾಖಲೆಯ ಸಾಧನೆ ಮಾಡಿದ್ದಾರೆ. ಅಭಿಷೇಕ್ ಈಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ಬ್ಯಾಟರ್ ಆಗಿ ದಾಖಲೆ ಪುಸ್ತಕದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಅಭಿಷೇಕ್ ಶರ್ಮಾ ಕೇವಲ 528 ಎಸೆತಗಳಲ್ಲಿ 1000 ಟಿ20 ರನ್ ಗಳಿಸುವ ಮೂಲಕ ಅಸಾಧ್ಯವೆನಿಸಿದ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾವುದೇ ಆಟಗಾರ ಇಷ್ಟು ಕಡಿಮೆ ಎಸೆತಗಳಲ್ಲಿ ಈ ಮೈಲುಗಲ್ಲು ಮುಟ್ಟಿರಲಿಲ್ಲ. ಇದರ ಮೊದಲು ಈ ದಾಖಲೆಯು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿನಲ್ಲಿತ್ತು. ಸೂರ್ಯ ಅವರು 573 ಎಸೆತಗಳಲ್ಲಿ 1000 ರನ್ ಗಳಿಸಿದ್ದರು.
ಈ ಸಾಧನೆಯಿಂದ ಅಭಿಷೇಕ್ ಶರ್ಮಾ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ವಿಶ್ವದ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಈಗ ಕ್ರಿಕೆಟ್ ಲೋಕದ ನಂಬರ್ ಒನ್ ಟಿ20 ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ನಂತರದ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್ (599 ಎಸೆತ), ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (604 ಎಸೆತ), ನ್ಯೂಜಿಲೆಂಡ್‌ನ ಫಿನ್ ಅಲೆನ್ (611 ಎಸೆತ) ಮತ್ತು ಟಿಮ್ ಡೇವಿಡ್ (614 ಎಸೆತ) ಇದ್ದಾರೆ.
ವಿಶ್ವದ ದಾಖಲೆ ಪಟ್ಟಿ ಸೇರಿದ ಭಾರತೀಯ
ಅಭಿಷೇಕ್ ಶರ್ಮಾ ತಮ್ಮ ಕೇವಲ 28ನೇ ಟಿ20 ಇನ್ನಿಂಗ್ಸ್‌ನಲ್ಲೇ 1000 ರನ್ ತಲುಪಿದರು. ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ವಿಶ್ವದ ಜಂಟಿ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲನ್ ಮತ್ತು ಜೆಕ್ ಗಣರಾಜ್ಯದ ಸಬಾವೂನ್ ಡೇವಿಜ್ ಅವರೊಂದಿಗೆ ಈ ದಾಖಲೆ ಪಟ್ಟಿ ಸೇರಿಕೊಂಡಿದ್ದಾರೆ.

