ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆನೆಜುವೆಲಾದಲ್ಲಿ ನಡೆದ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆಯ ಮೂಲಕ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕೊಲಂಬಿಯಾದ ಕಡೆಗೆ ತಮ್ಮ ಚಿತ್ತ ಹರಿಸಿದ್ದಾರೆ. ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿರುವ ಟ್ರಂಪ್, “ನಿಮ್ಮ ಕಾರ್ಯವೈಖರಿಯನ್ನು ತಿದ್ದಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾದೀತು” ಎಂದು ಗುಡುಗಿದ್ದಾರೆ.
ಕಳೆದ ದಿನವಷ್ಟೇ ಅಮೆರಿಕದ ಸೇನೆಯು ವೆನೆಜುವೆಲಾದಲ್ಲಿ ‘ಆಪರೇಷನ್ ಅಬ್ಸೊಲ್ಯೂಟ್ ರೆಸೊಲ್ವ್’ ಹೆಸರಿನ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದ ಅಮೆರಿಕನ್ ಕಮಾಂಡೋಗಳು, ಅವರನ್ನು ನೇರವಾಗಿ ನ್ಯೂಯಾರ್ಕ್‌ನ ಜೈಲಿಗೆ ಸ್ಥಳಾಂತರಿಸಿದ್ದಾರೆ. ಅಮೆರಿಕದ ಈ ದಿಟ್ಟ ಕ್ರಮವು ಲ್ಯಾಟಿನ್ ಅಮೆರಿಕದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವೆನೆಜುವೆಲಾ ಮೇಲಿನ ಈ ದಾಳಿಯನ್ನು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ತೀವ್ರವಾಗಿ ಖಂಡಿಸಿದ್ದರು. “ಇದು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲಿನ ಹಲ್ಲೆ ಮತ್ತು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಪೆಟ್ರೋ ಅವರ ಈ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿರುವ ಡೊನಾಲ್ಡ್ ಟ್ರಂಪ್, “ಪೆಟ್ರೋ ತಮ್ಮ ದೇಶದಲ್ಲಿ ತಯಾರಾಗುತ್ತಿರುವ ಕೊಕೇನ್ ಬಗ್ಗೆ ಗಮನಹರಿಸಲಿ. ಕೊಲಂಬಿಯಾದಲ್ಲಿ ತಯಾರಾಗುತ್ತಿರುವ ಮಾದಕ ದ್ರವ್ಯಗಳು ಅಮೆರಿಕಕ್ಕೆ ಅಕ್ರಮವಾಗಿ ರವಾನೆಯಾಗುತ್ತಿವೆ. ಅದನ್ನು ತಡೆಯುವ ಬದಲು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಿಮ್ಮ ಮಾದಕ ದ್ರವ್ಯಗಳ ಕಾರ್ಖಾನೆಗಳ ಕಡೆಗೆ ಮೊದಲು ಗಮನ ಕೊಡಿ” ಎಂದು ಎಚ್ಚರಿಸಿದ್ದಾರೆ.

