October 10, 2026
Saturday, October 10, 2026
spot_img

ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಕೈ ಹಿಡಿಯಲಿದ್ದಾರಾ ಸನ್‌ರೈಸರ್ಸ್ ಓನರ್ ಕಾವ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಮತ್ತು ಸಿನಿಮಾ ರಂಗದ ಪ್ರಮುಖ ಹೈ-ಪ್ರೊಫೈಲ್ ವ್ಯಕ್ತಿಗಳ ನಡುವಿನ ಗಾಳಿ ಸುದ್ದಿಗಳು ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಸದ್ಯ ದಕ್ಷಿಣ ಭಾರತದಾದ್ಯಂತ ಇಂತಹದ್ದೇ ಒಂದು ರೋಚಕ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸನ್ ಗ್ರೂಪ್ ಒಡೆಯ ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಲಾಸ್ ವೇಗಾಸ್ ಡೇಟಿಂಗ್ ಮತ್ತು ಮದುವೆ ವದಂತಿ

ಕಳೆದ ಒಂದು ವರ್ಷದಿಂದ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿತ್ತು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸಮಯ ಕಳೆದಿದ್ದಾರೆ ಮತ್ತು ಡಿನ್ನರ್ ಡೇಟ್ ಎಂಜಾಯ್ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ, ಇಬ್ಬರ ಪ್ರೇಮಕ್ಕೆ ಎರಡೂ ಕುಟುಂಬಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಹೊಸ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

ವದಂತಿಗಳನ್ನು ನಿರಾಕರಿಸಿದ್ದ ಅನಿರುದ್ಧ್

ಈ ಹೈ-ಪ್ರೊಫೈಲ್ ಮದುವೆ ಸುದ್ದಿಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅಷ್ಟೇ ಅಲ್ಲದೆ, ಈ ಹಿಂದೆಯೂ ಇಂತಹ ಮದುವೆ ವದಂತಿಗಳು ಕೇಳಿಬಂದಾಗ ಅನಿರುದ್ಧ್ ರವಿಚಂದರ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ “ಮದುವೆಯಾ? ಇಲ್ಲ… ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ” ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಪ್ರಸ್ತುತ ಕೇಳಿಬರುತ್ತಿರುವ ಸುದ್ದಿಗಳೂ ಕೇವಲ ಗಾಳಿ ಸುದ್ದಿಗಳಾಗಿರಬಹುದು ಎನ್ನಲಾಗುತ್ತಿದೆ.

ಫ್ಯಾನ್ಸ್ ವಲಯದಲ್ಲಿ ಭಾರಿ ಕುತೂಹಲ

ಪ್ರಸ್ತುತ ಕಾವ್ಯಾ ಮಾರನ್‌ಗೆ 33 ವರ್ಷ ಹಾಗೂ ಅನಿರುದ್ಧ್ ಅವರಿಗೆ 35 ವರ್ಷ ವಯಸ್ಸಾಗಿದ್ದು, ಇಬ್ಬರ ಸ್ಟೇಟಸ್ ಹಾಗೂ ವಯಸ್ಸಿಗೆ ಈ ಜೋಡಿ ಅತ್ಯುತ್ತಮ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಐಪಿಎಲ್ ಮೈದಾನದಲ್ಲಿ ತಂಡದ ಪ್ರದರ್ಶನಕ್ಕೆ ಟೆನ್ಶನ್ ಮಾಡಿಕೊಳ್ಳುತ್ತಾ ಕ್ಯಾಮೆರಾ ಕಣ್ಣಿಗೆ ಬೀಳುವ ಕಾವ್ಯಾ ಮಾರನ್ ಮತ್ತು ವೇದಿಕೆಯ ಮೇಲೆ ತಮ್ಮ ಸಂಗೀತದಿಂದ ಬೆಂಕಿ ಹಚ್ಚುವ ಅನಿರುದ್ಧ್ ರವಿಚಂದರ್ ನಿಜ ಜೀವನದಲ್ಲೂ ಒಂದಾಗುತ್ತಾರಾ? ಇವರಿಬ್ಬರ ಸಂಬಂಧದ ಅಸಲಿ ರಹಸ್ಯವೇನು? ಎಂಬುದಕ್ಕೆ ಬರುವ ಆಗಸ್ಟ್ ತಿಂಗಳಿನಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Must Read