ಇತ್ತೀಚಿನ ದಿನಗಳಲ್ಲಿ ಸಿಹಿತಿಂಡಿಗಳ ಸೇವನೆ ಕೇವಲ ಹಬ್ಬ-ಹರಿದಿನಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅವು ಭಾಗವಾಗುತ್ತಿರುವುದು ಸಾಮಾನ್ಯವಾಗಿದೆ. ಮದುವೆ, ಸಂಭ್ರಮ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಸಿಹಿ ತಿನ್ನುವುದು ಸಹಜ. ಆದರೆ ಕೆಲವರಿಗೆ ಊಟದ ನಂತರ ಸಿಹಿ ತಿನ್ನುವುದು ಒಂದು ನಿತ್ಯದ ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸವು ದೇಹಕ್ಕೆ ಸಣ್ಣ ಮಟ್ಟಿನಲ್ಲಿ ಆನಂದ ನೀಡಿದರೂ, ದೀರ್ಘಾವಧಿಯಲ್ಲಿ ಇದು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ನಿಯಮಿತವಾಗಿ ಸಿಹಿತಿಂಡಿಗಳನ್ನು ಸೇವಿಸುವವರ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ತೂಕ ಹೆಚ್ಚಳ
ದಿನವೂ ಸಿಹಿ ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರುತ್ತದೆ. ಸಕ್ಕರೆ ಮತ್ತು ಕೊಬ್ಬಿನಿಂದ ಕೂಡಿದ ಸಿಹಿತಿಂಡಿಗಳು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತವೆ. ಇದು ಕ್ರಮೇಣ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತ
ಸಿಹಿತಿಂಡಿಗಳಲ್ಲಿರುವ ಸಕ್ಕರೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ಆದರೆ, ನಂತರ ದೇಹದಲ್ಲಿ ಸಕ್ಕರೆ ಮಟ್ಟ ತೀವ್ರ ಏರಿಳಿತಗೊಳ್ಳುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಜೀರ್ಣಾಂಗದ ತೊಂದರೆ
ಸಿಹಿತಿಂಡಿಗಳಲ್ಲಿರುವ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಜೀರ್ಣಾಂಗದ ಮೇಲೆ ಒತ್ತಡ ಉಂಟುಮಾಡುತ್ತದೆ. ಇದರಿಂದ ಗ್ಯಾಸ್, ಅಜೀರ್ಣ ಹಾಗೂ ಹೊಟ್ಟೆ ಉಬ್ಬುವಿಕೆ ಹೆಚ್ಚಾಗಬಹುದು.
ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯ
ಸಿಹಿತಿಂಡಿಗಳ ನಿಯಮಿತ ಸೇವನೆಯು ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಲ್ಲಿನ ಸಮಸ್ಯೆಗಳು
ಸಕ್ಕರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಪರಿಣಮಿಸುತ್ತದೆ. ಇದು ಹಲ್ಲಿನ ಮೇಲಿನ ದಂತಕವಚವನ್ನು ಹಾಳುಮಾಡಿ ಹುಳುಕು, ಹಲ್ಲಿನ ಕೊಳೆತ ಹಾಗೂ ಇತರ ಬಾಯಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸಿಹಿ ತಿನ್ನುವುದು ಒಂದು ಆನಂದದ ಸಂಗತಿ ಎನಿಸಿದರೂ, ಅದನ್ನು ದಿನನಿತ್ಯದ ಅಭ್ಯಾಸವನ್ನಾಗಿಸುವುದು ದೇಹದ ಆರೋಗ್ಯಕ್ಕೆ ಹಾನಿಕಾರಕ. ಹಬ್ಬ-ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಿಹಿತಿಂಡಿಗಳನ್ನು ಸವಿಯುವುದರಿಂದ ದೇಹಕ್ಕೆ ತೊಂದರೆ ಆಗುವುದಿಲ್ಲ. ಆದರೆ, ನಿಯಮಿತ ಸೇವನೆಯಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ನಿಯಂತ್ರಣ ಅತ್ಯಗತ್ಯ. ಆರೋಗ್ಯವನ್ನು ಕಾಪಾಡಲು ಮಿತವಾದ ಸಿಹಿ ಸೇವನೆ ಅವಶ್ಯಕ.