July 6, 2026
Monday, July 6, 2026
spot_img

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಮಾಷೆ ಮಾಡ್ತಿದ್ಯಾ? ಸಂಜು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಭಾರತ ತಂಡದಲ್ಲಿ ಪಾದಾರ್ಪಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ದಿಢೀರ್ ಕೈಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಯಾಮ್ಸನ್ ಬಲಿಪಶು: ಮಂಜ್ರೇಕರ್ ಕಿಡಿ

ಟಿ20 ವಿಶ್ವಕಪ್‌ನಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದು ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದ ಸ್ಯಾಮ್ಸನ್ ಅವರನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. “ಒಂದು ವೇಳೆ ಸಂಜು ಗಾಯಗೊಂಡಿದ್ದರೆ ಮಾತ್ರ ಈ ನಿರ್ಧಾರವನ್ನು ಒಪ್ಪಬಹುದು. ಇಲ್ಲದಿದ್ದರೆ, ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಲಕ್ಷಣ ಹಾಗೂ ನಂಬಲಾಗದ ಆಯ್ಕೆ” ಎಂದು ಮಂಜ್ರೇಕರ್ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ

ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲು ಸ್ಯಾಮ್ಸನ್ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ ಎಂದು ಮಂಜ್ರೇಕರ್ ವಾದಿಸಿದ್ದಾರೆ. ಸಂಜು ಅವರನ್ನು ತಂಡದಲ್ಲೇ ಉಳಿಸಿಕೊಂಡು 3ನೇ ಕ್ರಮಾಂಕದಲ್ಲಿ ಆಡಿಸಬಹುದಿತ್ತು. “ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕ್ರಿಕೆಟ್ ಜೊತೆ ತಮಾಷೆ ಮಾಡುತ್ತಿದೆಯೇ? ಯಾವುದೇ ಬಲವಾದ ಕಾರಣವಿಲ್ಲದೆ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !