ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆಗೆ ಪ್ರಚಾರದ ಬಿರುಸು ಜೋರಾಗಿದ್ದು, ಇದರ ನಡುವೆ ಪಕ್ಷಗಳು ಮತಬೇಟೆಗೆ ರಣತಂತ್ರ ರೂಪಿಸುತ್ತಿದೆ. ಇಂದು ಕಾಂಗ್ರೆಸ್ ಸಹಿತ ಮಹಾಘಟಬಂಧನ್ ಮೈತ್ರಿಕೂಟ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿಗೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದ್ದ ವಿಪಕ್ಷ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಫೋಟೋ ವಿವಾದ ತಣ್ಣಗಾಗುತ್ತಿದ್ದಂತೇ, ಈಗ ಮಹಾಘಟಬಂಧನ್ ಮೈತ್ರಿಕೂಟದ ಚುನಾವಣಾ ಪ್ರಣಾಳಿಕೆಯಲ್ಲೂ ಫೋಟೋ ವಿವಾದ ಭುಗಿಲೆದ್ದಿದೆ.
ಮಹಾಘಟಬಂಧನ್ ಮೈತ್ರಿಕೂಟ ಆಡಳಿತಾರೂಢ ಎನ್‌ಡಿಎಗಿಂತ ಮೊದಲು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ ಚುನಾವಣಾ ಪ್ರಣಾಳಿಕೆಯ ಮುಖಪುಟ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. ಕವರ್ ಫೋಟೋದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಫೋಟೋ ಮಾತ್ರ ದೊಡ್ಡ ಗಾತ್ರದಲ್ಲಿದ್ದು, ರಾಹುಲ್ ಗಾಂಧಿ ಅವರ ಫೋಟೋ ಗಾತ್ರ ಚಿಕ್ಕದಿದೆ. ಇದು ಬಿಹಾರದಲ್ಲಿ ತೇಜಸ್ವಿ ಯಾದವ್ ಅವರೇ ದೊಡ್ಡಣ್ಣ ಎಂಬ ಸಂದೇಶ ರವಾನಿಸಿದಂತಿದೆ.
ಬಿಹಾರ ಚುನಾವಣೆಗೆ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ, ಮಹಾಘಟಬಂಧನ್ ಮೈತ್ರಿಕೂಟದಲ್ಲಿ ತೇಜಸ್ವಿ ಯಾದವ್ ಅಬ್ಬರ ಜೋರಾಗಿದೆ. ಎಲ್ಲೆಡೆ ಅವರೇ ರಾರಾಜಿಸುತ್ತಿದ್ದರು.
ಮಹಾಘಟಬಂಧನ್ ಒಂದರ್ಥದಲ್ಲಿ ಕೇಂದ್ರಕ್ಕೆ ರಾಹುಲ್ ಗಾಂಧಿ, ರಾಜ್ಯಕ್ಕೆ ತೇಜಸ್ವಿ ಯಾದವ್ ಎಂಬ ಅಲಿಖಿತ ನಿಯಮ ಮಾಡಿಕೊಂಡಂತೆ ವರ್ತಿಸುತ್ತಿದೆ. ಇದೇ ಮಾತನ್ನು ಖುದ್ದು ತೇಜಸ್ವಿ ಯಾದವ್ ಕೂಡ ಹಲವು ಬಾರಿ ಹೇಳಿದ್ದಾರೆ.
ಆದರೆ ಬಿಹಾರದಲ್ಲಿ ಮಾತ್ರ ಆರ್‌ಜೆಡಿಯೇ “ಬಡಾ ಮಿಯಾ” ಎಂದೂ ಹೇಳಿರುವ ತೇಜಸ್ವಿ ಯಾದವ್, ಕಾಂಗ್ರೆಸ್ ಪಕ್ಷವನ್ನು ಎರಡನೇ ಪ್ರಮುಖ ಪಾಲುದಾರ ಪಕ್ಷವನ್ನಾಗಿಯೇ ನೋಡುತ್ತಾರೆ. ಕಾಂಗ್ರೆಸ್ ಕೂಡ ಇದನ್ನು ಒಪ್ಪಿಕೊಂಡಿದ್ದು, ಇದೇ ಕಾರಣಕ್ಕೆ ಮಹಾಘಟಬಂಧನ್ ಮೈತ್ರಿ ಸೂತ್ರವನ್ನು ಆರ್‌ಜೆಡಿ ಕೈಗೆ ಕೊಟ್ಟಿದೆ.
ನಾಳೆ ರಾಹುಲ್ ಗಾಂಧಿ ಅವರು ತೇಜಸ್ವಿ ಯಾದವ್ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಮೈತ್ರಿಕೂಟದಲ್ಲಾಗಲಿ, ತಮ್ಮ ನಡುವೆಯಾಗಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಇಬ್ಬರೂ ನಾಯಕರು ರವಾನಿಸಲಿದ್ದಾರೆ.

