ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ನಟಿಯರ ವಿರುದ್ಧ ಕಿರುಕುಳ ಮತ್ತು ಸುಳ್ಳು ಪ್ರಚಾರ ಹೊಸದೇನಲ್ಲ. ಈಗ ಈ ಸಾಲಿಗೆ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ ಅವರ ಹೆಸರು ಸೇರಿದೆ. ಇತ್ತೀಚೆಗೆ, ನಟಿಯ ಫೋಟೋವನ್ನು ಅಸಭ್ಯ ರೀತಿಯಲ್ಲಿ ಎಡಿಟ್ ಮಾಡಿ, ಸುಳ್ಳು ಮಾಹಿತಿ ಹಬ್ಬಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಈ ಕೃತ್ಯವನ್ನು ಮಾಡಿದ್ದವರು ಕೇವಲ 20 ವರ್ಷದ ಯುವತಿ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.
ಅನುಪಮಾ ಪರಮೇಶ್ವರನ್ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ಒಂದು ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ನನ್ನ ಫೋಟೋವನ್ನು ದುರುಪಯೋಗಪಡಿಸಿಕೊಂಡು ತಪ್ಪು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ನನ್ನ ಕುಟುಂಬ ಮತ್ತು ಸ್ನೇಹಿತರನ್ನು ಟ್ಯಾಗ್ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದು ನನ್ನನ್ನು ಮಾನಸಿಕವಾಗಿ ತುಂಬಾ ನೋಯಿಸಿದೆ” ಎಂದು ಅವರು ಹೇಳಿದ್ದಾರೆ.
ತನಿಖೆಯ ನಂತರ ಈ ಕೃತ್ಯದ ಹಿಂದೆ ಇದ್ದ ಯುವತಿಯ ಗುರುತು ಪತ್ತೆಯಾಯಿತು. ಕೇರಳ ಸೈಬರ್ ಕ್ರೈಂ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆದಿದ್ದು, ಆರೋಪಿಯಾಗಿದ್ದವರು ತಮಿಳುನಾಡಿನ 20 ವರ್ಷದ ಯುವತಿ ಎಂದು ತಿಳಿದುಬಂದಿದೆ. “ಆಕೆಯ ವಯಸ್ಸು ಮತ್ತು ಭವಿಷ್ಯವನ್ನು ಗಮನಿಸಿ ಆಕೆಯ ಹೆಸರನ್ನು ಬಹಿರಂಗಪಡಿಸುವುದಿಲ್ಲ” ಎಂದು ಅನುಪಮಾ ತಿಳಿಸಿದ್ದಾರೆ.

