ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಿಂದೆ ಎಂಟು ಬಾರಿ ಪ್ರಕರಣ ದಾಖಲಿಸಿರುವುದನ್ನು ಮುಚ್ಚಿಟ್ಟಿದ್ದ ಐವರು ದಾವೆದಾರರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ₹10 ಲಕ್ಷ ದಂಡ ವಿಧಿಸಿದೆ. ದಂಡದ ಮೊತ್ತವನ್ನು ತಿಂಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದೂ ನಿರ್ದೇಶಿಸಿದೆ.
ಗಂಗಮ್ಮ ಮತ್ತು ಇತರ ನಾಲ್ವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 10 ಲಕ್ಷ ದಂಡ ವಿಧಿಸಿದ್ದಾರೆ. ಆ ಕುಟುಂಬದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಚಾಟಿ ಬೀಸಿದೆ.
ದೊಡ್ಡಬಸ್ತಿ ಮುಖ್ಯರಸ್ತೆಯ ಭುವನೇಶ್ವರಿ ನಗರದ ಗಂಗಮ್ಮ ಮತ್ತು ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ನಾಲ್ಕು ವಾರಗಳಲ್ಲಿ 10 ಲಕ್ಷ ರೂ. ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಲು ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದೆ. ಈವರೆಗೂ ಎಂಟು ಬಾರಿ ಕಾನೂನು ಹೋರಾಟ ನಡೆದಿದೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ. ಆದ್ದರಿಂದ ಅರ್ಜಿದಾರರು ತಪ್ಪಿತಸ್ಥರಾಗಿದ್ದು, ಶುದ್ಧಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಬರುವವರು ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಂಳಕಗೊಳಿಸಿದಂತಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.