ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರಾದರೂ ಮೃತಪಟ್ಟಾಗ ದೇಹಕ್ಕೆ ಬುರ್ಖಾ ಹಾಕಿ ಮಣ್ಣು ಮಾಡಿದ್ರೆ ಆ ಮೃತದೇಹ ಹಾಗೆಯೇ ನೂರುಕಾಲ ಇರುತ್ತದಂತೆ. ಇನ್ನು ಸಣ್ಣ ಸಣ್ಣ ಡ್ರೆಸ್ ಹಾಕಿ ಮೃತದೇಹವನ್ನು ಮಣ್ಣು ಮಾಡಿದ್ರೆ ಆ ದೇಹವನ್ನು ಹಾವು, ಚೇಳು ತಿನ್ನುತ್ತವಂತೆ! ಶಾಲೆಯ ಸೈನ್ಸ್ ಎಕ್ಸಿಬಿಷನ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆರಿಸಿದ ಟಾಪಿಕ್ ಇದು!!
ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನು ಆಗಲ್ಲ, ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು ಚೇಳು ತಿನ್ನುತ್ತವೆ ಎಂಬ ವಿದ್ಯಾರ್ಥಿನಿಯೊಬ್ಬಳು ನೀಡಿರುವ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವ ಓರ್ವ ವಿದ್ಯಾರ್ಥಿನಿ ತಯಾರಿಸಿರುವ ವಿಷಯ ಮಾದರಿ ಮತ್ತು ಅದಕ್ಕೆ ಆಕೆ ನೀಡುವ ವಿವರಣೆಯ ವಿಡಿಯೋ ವೈರಲ್ ಆಗಿದೆ. ಬಾಲಕಿಯು ಧರ್ಮದ ಕುರಿತಂತೆ ಮಾತನಾಡಿರುವ ದೃಶ್ಯಾವಳಿ ವೈರಲ್ ಆಗುತ್ತಿದೆ.
ವಿದ್ಯಾರ್ಥಿನಿ ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಒಂದು ಗೊಂಬೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊದ್ದು ಗೊಂಬೆಯನ್ನು ಚೇಳಿನ ಚಿತ್ರವಿರುವ ಬಟ್ಟೆಯಿಂದ ಮುಚ್ಚಿದ್ದಾಳೆ. ಇದಕ್ಕೆ ವಿದ್ಯಾರ್ಥಿನಿ ವಿವರಣೆಯನ್ನೂ ಕೂಡ ನೀಡಿದ್ದಾಳೆ. ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನು ಆಗಲ್ಲ. ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು, ಚೇಳು ತಿನ್ನುತ್ತವೆ” ಎಂದು ವಿದ್ಯಾರ್ಥಿನಿ ವಿವರಣೆ ನೀಡಿದ್ದಾಳೆ.
ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕುರಿತು ಹಲವು ಟೀಕೆಗಳು ವ್ಯಕ್ತವಾಗುತ್ತಿದೆ.
ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ವಿವರಣೆ ಕೋರಿ ಖಾಸಗಿ ಶಾಲೆಗೆ ನೋಟಿಸ್ ನೀಡಿದೆ. ಅಲ್ಲದೆ, ಬ್ಲಾಕ್ ಶಿಕ್ಷಣಾಧಿಕಾರಿಗೂ ವರದಿ ನೀಡುವಂತೆ ಸೂಚಿಲಿದೆ. ಆದರೆ, ನೋಟಿಸ್’ಗೆ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.