January19, 2026
Monday, January 19, 2026
spot_img

ಕೊಲೆ ಕೇಸ್ ಮುಚ್ಚಿ ಹಾಕುವ ಯತ್ನವೇ?: ಸಿಎಂ ‘ಪ್ರಾಮಾಣಿಕತೆ’ ಪ್ರಶ್ನಿಸಿದ ಜನಾರ್ದನ ರೆಡ್ಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿಯ ಇತ್ತೀಚಿನ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿರುವ ಶಾಸಕ ಜಿ. ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ತಾವು ‘ಪ್ರಾಮಾಣಿಕ ರಾಜಕಾರಣಿ’ ಎಂದು ಬಿಂಬಿಸಿಕೊಳ್ಳುವ ಸಿಎಂ, ಈ ಪ್ರಕರಣದಲ್ಲಿ ತಮ್ಮದೇ ಪಕ್ಷದ ಶಾಸಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ 7 ಪ್ರಮುಖ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾಗಿ ಸಿದ್ದರಾಮಯ್ಯನವರು ಆಗಾಗ ಹೇಳಿಕೊಳ್ಳುತ್ತಾರೆ. “ಅಂದು ಎದೆ ತಟ್ಟಿಕೊಂಡು ಕೇಸ್ ಕೊಟ್ಟವರು, ಇಂದು ಬಳ್ಳಾರಿ ಪ್ರಕರಣ ಬಂದಾಗ ಯಾಕೆ ಮೌನವಾಗಿದ್ದಾರೆ? ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಹಿಂದೇಟು ಹಾಕುತ್ತಿರುವುದು ನಿಮ್ಮ ಮಡಿವಂತಿಕೆಯೇ?” ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ಬಳ್ಳಾರಿಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ಪಾತ್ರವಿರುವುದು ಈಗಾಗಲೇ ಸಾಬೀತಾಗಿದೆ. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಕೇವಲ ಮೂವರು ಗನ್‍ಮ್ಯಾನ್‌ಗಳನ್ನು ಬಂಧಿಸಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. “ಜನರು ಈ ಘಟನೆಯನ್ನು ಮರೆಯಲಿ ಎಂಬ ಕೆಟ್ಟ ಆಲೋಚನೆ ನಿಮ್ಮದಾಗಿದೆ. ಶಾಸಕರನ್ನು ಬಂಧಿಸದೆ ತನಿಖೆಯನ್ನು ಹಳ್ಳ ಹಿಡಿಸುವ ಕೆಲಸ ನಡೆಯುತ್ತಿದೆ” ಎಂದು ರೆಡ್ಡಿ ಮಾಧ್ಯಮಗಳ ಮುಂದೆ ಗುಡುಗಿದ್ದಾರೆ.

ಬಿಜೆಪಿ ಸರ್ಕಾರ ಎಷ್ಟು ಕೇಸ್‌ಗಳನ್ನು ಸಿಬಿಐಗೆ ಕೊಟ್ಟಿದೆ ಎಂಬ ಚರ್ಚೆಗಿಂತ, ಪ್ರಸ್ತುತ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಮುಖ್ಯ. ಮುಖ್ಯಮಂತ್ರಿಗಳು ತಮ್ಮ ಮೇಲಿರುವ ಕಂಕಣಬದ್ಧತೆಯ ಹಣೆಪಟ್ಟಿಯನ್ನು ಉಳಿಸಿಕೊಳ್ಳಬೇಕಾದರೆ ತಕ್ಷಣವೇ ಈ ಕೇಸನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

Must Read