ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕ ಜಿಲ್ಲೆಯ ರೈತರ ಪಿತ್ರಾರ್ಜಿತ ಆಸ್ತಿ ಕುರಿತು ವಕ್ಫ್ ಬೋರ್ಡ್ ಅಧಿಸೂಚನೆ ಹೊರಡಿಸಿರುವುದಕ್ಕೆ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರು ವಕ್ಫ್ ಆಸ್ತಿ ಎನ್ನುತ್ತಾರಲ್ಲ ಆದರೆ ಅವರು ಅದನ್ನು ಯಾರಿಂದ ಪಡೆದರು? ಈ ಆಸ್ತಿಯನ್ನು ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಅರೇಬಿಯಾದ ಮುಲ್ಲಾಗಳು ಉಡುಗೊರೆಯಾಗಿ ನೀಡಿದ್ದಾರೆಯೇ? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು? ಯಾರಿಂದ ಅವರಿಗೆ ಬಳುವಳಿ ಬಂದಿದ್ದು ಎಂದು ಪ್ರಶ್ನಿಸಿದರು.
ಮೈಸೂರಿನ ಹುಣಸೂರಿನ ಗಣೇಶ ದೇವಸ್ಥಾನದ 17 ಎಕರೆ ಜಾಗ ನಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಹೇಳಿಕೊಂಡಿತ್ತು. ಯಾರದ್ದೋ ಶವವನ್ನು ತೆಗೆದುಕೊಂಡು ಹೋಗಿ ಹೂತಿಟ್ಟು ನಮ್ಮದು ಎಂದು ಹೇಳಿಕೊಳ್ಳುತ್ತಾರೆ. ಚಿಕ್ಕಮಗಳೂರಿನಲ್ಲಿಯೂ ಅದೇ ಕಥೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಹೊರಡಿಸಿ ಇದು ನಮ್ಮದು ಎನ್ನುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.