ಇಶಾನ್ ದ್ವಿಶತಕ, ಕೊಹ್ಲಿ ಶತಕ: ಬಾಂಗ್ಲಾಗೆ 410 ರನ್​ಗಳ ಬೃಹತ್​ ಗುರಿ ನೀಡಿದ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಭಾರತ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದ್ದು, ಇಶಾನ್​ ಕಿಶನ್ ವೇಗದ ದ್ವಿಶತಕ ಮತ್ತು ವಿರಾಟ್​ ಕೊಹ್ಲಿ ​ದಾಖಲೆಯ ಶತಕದಾಟದಿಂದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ ಎಂಟು ವಿಕೆಟ್​ ನಷ್ಟಕ್ಕೆ 409 ರನ್​​ಗಳನ್ನು ಪೇರಿಸಿದೆ.

ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​​ ಗೆದ್ದ ಬಾಂಗ್ಲಾದೇಶ ಮೊದಲ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತ್ತು. ತಂಡದ 15 ರನ್​​ ಆಗುಷ್ಟರಲ್ಲಿ ಶಿಖರ್​ ಧವನ್​ (3) ಮೆಹಿದಿ ಹಸನ್ ಮಿರಾಜ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಮತ್ತೊಬ್ಬ ಆರಂಭಿಕ ಇಶಾನ್​ ಕಿಶನ್ ಜೊತೆಗೂಡಿದ ವಿರಾಟ್​ ಕೊಹ್ಲಿ ಭರ್ಜರಿ ಆಟ ಪ್ರದರ್ಶಿಸಿದರು. ಇಬ್ಬರೂ ಕೂಡ ಅದ್ಭುತ ಹಾಗೂ ಆಕರ್ಷಕ ಆಟವಾಡಿ ಕೇವಲ 190 ಎಸೆತಗಳಲ್ಲಿ ಬೃಹತ್​ 290 ರನ್​ಗಳ ಜೊತೆಯಾಟ ನೀಡಿದರು.

ಅದರಲ್ಲೂ, ಇಶಾನ್​ ಕಿಶನ್​ ಸ್ಫೋಟಕ ಬ್ಯಾಟಿಂಗ್​ ಮಾಡಿ, 85 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ನಂತರ ಮತ್ತಷ್ಟು ಬಿರುಸಿನ ಆಟವಾಡಿದ ಅವರು ಸಿಕ್ಸರ್​ ಮತ್ತು ಬೌಂಡರಿಗಳೊಂದಿಗೆ ಕೇವಲ 126 ಎಸೆತಗಳಲ್ಲಿ ವೇಗದ ದ್ವಿಶತಕ ದಾಖಲಿಸಿದರು. ಈ ಮೂಲಕ ದ್ವಿಶತಕ ದಾಖಲಿಸಿದ ಭಾರತದ ನಾಲ್ಕನೇ ಆಟಗಾರರ ಎಂಬ ಕೀರ್ತಿಗೆ ಇಶಾನ್​ ಕಿಶನ್​ ಪಾತ್ರರಾದರು.

ಮತ್ತೊಂದೆಡೆ ವಿರಾಟ್​ ಕೊಹ್ಲಿ ಕೂಡ ಆಕರ್ಷಕ ಬ್ಯಾಟಿಂಗ್​ ಮಾಡಿದರು. 86 ಎಸೆತಗಳಲ್ಲಿ ಶತಕ ಸಿಡಿಸಿ ವಿರಾಟ್​ ಮಿಂಚಿದರು. ಇದು ಏಕದಿನದಲ್ಲಿ ಕೊಹ್ಲಿ ಬಾರಿಸಿದ 44ನೇ ಶತಕವಾಗಿದ್ದು, ಒಟ್ಟಾರೆ 72ನೇ ಶತಕವನ್ನು ರನ್​ ಮಿಷನ್​ ದಾಖಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!