ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿ NIA ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು,ಇದ್ರಲ್ಲಿ ಕರ್ನಾಟಕದಲ್ಲಿ ರೋಬೋಟ್ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಉಗ್ರ ಸಂಘಟನೆ ಐಸಿಸ್ (ISIS) ಸಂಚು ರೂಪಿಸಿತ್ತು ಎಂದು ಇದರಲ್ಲಿ ಉಲ್ಲೇಖಿಸಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ NIA ಅಧಿಕಾರಿಗಳು ನ್ಯಾಯಾಲಯಕ್ಕೆ ಶಂಕಿತ ಉಗ್ರ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರಿಕ್ ಸೇರಿದಂತೆ 9 ಜನರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ .
ಚಾರ್ಜ್ ಶೀಟ್ ನಲ್ಲಿ ಬಂಧಿತ ಐವರು ಇಂಜಿನಿಯರಿಂಗ್ ಪದವೀಧರರಿಗೆ ರೋಬೋಟ್ ಮತ್ತು ಡ್ರೋಣ್ ಬಳಕೆಯ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಉಗ್ರರು ಟಾರ್ಗೆಟ್ ನೀಡಿದ್ದರು ಎನ್ನುವ ವಿಚಾರ ಬಯಲಾಗಿದೆ. ಐಸಿಸ್ ಹ್ಯಾಂಡ್ಲರ್ ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಿದ್ದರು. ಈ ಮೂಲಕ ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ತಿಳಿಸಿದ್ದರು ಎಂದು ವಿಚಾರಬೆಳಕಿಗೆ ಬಂದಿದೆ.
ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿರುವ ಬಂಧಿತ ಶಂಕಿತ ಉಗ್ರರಾಗಿರುವ ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಅವರ ತೀವ್ರ ವಿಚಾರಣೆ ವೇಳೆ ಈ ಸತ್ಯ ಬಾಯಿಬಿಟ್ಟಿದ್ದಾರೆ.
ಶಿವಮೊಗ್ಗ ತುಂಗಾತೀರದಲ್ಲಿ ಸಂಭವಿಸಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಐಸಿಸ್ ಒಳಸಂಚು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ದಕ್ಷಿಣ ಕನ್ನಡ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಆರು ಕಡೆಗಳಿಗೆ ದಾಳಿ ನಡೆಸಿ ಇಬ್ಬರು ಐಸಿಸ್ ಸಕ್ರಿಯ ಸದಸ್ಯರಾಗಿದ್ದ ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್ ಮತ್ತು ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ನನ್ನು ಬಂಧಿಸಿದ್ದರು. ಈ ಹಿಂದೆ ಬಂಧನವಾಗಿರುವ ಆರೋಪಿ ಮಾಜ್ ವಿಚಾರಣೆ ವೇಳೆ ಈ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು.ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಮತ್ತು ಯಾಸೀನ್ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು. ಆ ಮೂಲಕ ಮಂಗಳೂರು, ಮಲೆನಾಡು ಮತ್ತು ರಾಜ್ಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಶಿವಮೊಗ್ಗ ಮಾಜ್ ಮತ್ತು ಯಾಸೀನ್ ಬಂಧನ ಬಳಿಕ ನಾಪತ್ತೆಯಾಗಿದ್ದ ಶಾರೀಕ್, ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದನು.
ಇವರ ವಿರುದ್ಧ ಯುಎ(ಪಿ) ಆಕ್ಟ್ 1967, ಐಪಿಸಿ ಮತ್ತು ಕೆಎಸ್ ಪ್ರಿವೆನ್ಶನ್ ಆಫ್ ಡಿಸ್ಟ್ರಕ್ಷನ್ ಅಂಡ್ ಲಾಸ್ ಆಫ್ ಪ್ರಾಪರ್ಟಿ ಆಕ್ಟ್, 1981 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಈ ವರ್ಷದ ಮಾರ್ಚ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.