ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದೊಳಗೆ ಆತಂಕದ ವಾತಾವರಣ ಉಂಟಾಗಿದೆ. ಈ ದಾಳಿಯ ಪರಿಣಾಮವಾಗಿ ಶ್ರೀಲಂಕಾದ ಎಂಟು ಪ್ರಮುಖ ಆಟಗಾರರು ಸುರಕ್ಷತಾ ಕಾರಣದಿಂದ ತವರಿಗೆ ಮರಳಲು ತೀರ್ಮಾನಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಈ ಆಟಗಾರರು ತಮ್ಮ ಜೀವಭಯವನ್ನು ಉಲ್ಲೇಖಿಸಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ಗೆ ವಿನಂತಿ ಸಲ್ಲಿಸಿದ್ದು, ಬೋರ್ಡ್ ಅವರ ನಿರ್ಧಾರವನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಉಳಿದ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಪಾಕಿಸ್ತಾನದಲ್ಲೇ ಉಳಿದು ಸರಣಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದೆ. ಪಿಸಿಬಿ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಟಗಾರರ ಸುರಕ್ಷತೆ ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೋರ್ಡ್ ಸ್ಪಷ್ಟಪಡಿಸಿದೆ.
ಆದರೆ ಗುರುವಾರ ನಿಗದಿಯಾಗಿರುವ ಎರಡನೇ ಏಕದಿನ ಪಂದ್ಯ ನಡೆಯಲಿದೆಯೇ ಎಂಬ ಪ್ರಶ್ನೆ ಈಗ ಗಂಭೀರವಾಗಿದ್ದು, ಶ್ರೀಲಂಕಾ ತಂಡದ ಹಲವಾರು ಸದಸ್ಯರು ಲಭ್ಯವಿರದ ಕಾರಣ ಪಂದ್ಯವನ್ನು ಮುಂದೂಡಲು ಸಾಧ್ಯತೆ ವ್ಯಕ್ತವಾಗಿದೆ.

