ಹೊಸದಿಗಂತ ವರದಿ ಯಾದಗಿರಿ:
ಕರ್ತವ್ಯ ಲೋಪದಿಂದ ನೌಕರಿಯಿಂದ ವಜಾಗೊಂಡಿರುವ ಕೆಕೆಆರ್ ಟಿಸಿ ಚಾಲಕ ಕಂ ನಿರ್ವಾಹಕನೊಬ್ಬ ಬಸ್ ಕಳ್ಳತನ ಮಾಡಿದ ಅಪರೂಪದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮಾ.19 ರಂದು ಈ ಘಟನೆ ನಡೆದಿದೆ. ಸೇವೆಯಿಂದ ವಜಾಗೊಂಡಿರುವ ಚಾಲಕ ಕಂ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಎಂಬುವವನೇ ಈ ಕೃತ್ಯ ಎಸಗಿದ್ದಾನೆ. ಸೈದಾಪುರ ಬಸ್ ನಿಲ್ದಾಣದಿಂದ ಬಸ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಬಸ್ ಇದಾಗಿದೆ. ಈ ಹಿಂದೆ ಕೂಡಾ ಒಂದೆರಡು ಸಲ ಕರ್ತವ್ಯ ಲೋಪ ಹಿನ್ನಲೆ ಅಮಾನತ್ತು ಮಾಡಲಾಗಿತ್ತು. ತನ್ನ ಊರಾದ ರಾಚನಳ್ಳಿಗೆ ಹೋಗಲು ಯಾವುದೇ ವಾಹನಗಳು ಇಲ್ಲದಕ್ಕೆ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ ಚಾಲನೆ ಮಾಡಿಕೊಂಡು ಕದ್ದೋಯ್ದಿದ್ದಾನೆ.
ಬಸ್ ಕಳ್ಳತನ ಮಾಡಿ ಊರಿನ ದೇವಸ್ಥಾನ ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಇತನ ವಿರುದ್ಧ ಕೇಸ್ ದಾಖಲಾಗಿದೆ. ಕಳ್ಳತನವಾದ ಬಸ್ ಅನ್ನು ಪೊಲೀಸರು ಮರಳಿ ವಾಪಸ್ ತಂದಿದ್ದಾರೆ.



