ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಗಾಜಾ ಉಭಯ ದೇಶಗಳ ನಡೆಯುತ್ತಿರುವ ವೈಮಾನಿಕ ದಾಳಿಯಿಂದ ಸಾಮಾನ್ಯ ನಾಗರಿಕರು ಜೀವ ಪಣಕ್ಕಿಡುವಂತಾಗಿದೆ. ಕಳೆದ 24ಗಂಟೆಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಇದುವರೆಗೂ 400ಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದಾರೆ.ಮೊದಲು ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ಗಳನ್ನು ಉಡಾಯಿಸಿ ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯ ಎಸಗಿದ್ದರು, ಇದಕ್ಕೆ ಇಸ್ರೇಲ್ ದಿಟ್ಟ ಉತ್ತರ ನೀಡಿ ವೈಮಾನಿಕ ದಾಳಿ ನಡೆಸಿತು.
ಇದರಿಂದ ಎರಡೂ ಕಡೆ ಭಾರೀ ಪ್ರಾಣಹಾನಿ ಸಂಭವಿಸಿದೆ. ಹಮಾಸ್ ದಾಳಿಯಲ್ಲಿ ಇನ್ನೂರು ಜನರು ಪ್ರಾಣ ಕಳೆದುಕೊಂಡರೆ, ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 230 ಮೀರಿದೆ. ಒಟ್ಟು 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 2 ಸಾವಿರಕ್ಕೂ ಹೆಚ್ಚು ಸ್ಥಳೀಯರು ಗಾಯಗೊಂಡಿದ್ದಾರೆ. ಇಸ್ರೇಲ್‌ನ 14 ಪ್ರದೇಶಗಳಿಗೆ ಭಯೋತ್ಪಾದಕರು ನುಗ್ಗಿದ್ದಾರೆ ಎಂದು ವರದಿಯಾಗಿದೆ. ತನ್ನ ದೇಶದ ಮೇಲೆ ಯುದ್ಧ ಸಾರುವ ಶತ್ರುಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೆಹಲಿಯಿಂದ ಇಸ್ರೇಲ್ ರಾಜಧಾನಿಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಘೋಷಿಸಿದೆ.
ಮತ್ತೊಂದೆಡೆ, ಭಾರತ ಮತ್ತು ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸಿದವು. ಜಗತ್ತಿನ ಉನ್ನತ ನಾಯಕರು ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದ್ದಾರೆ.