ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಕದನ ವಿರಾಮ ಉಲ್ಲಂಘಿಸಿದ ವರದಿಗಳ ನಡುವೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಝಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.
ತಾತ್ಕಾಲಿಕ ಕದನ ವಿರಾಮ ಒಪ್ಪಂದದ ನಡುವೆಯೇ, ಇಸ್ರೇಲಿ ಸೇನೆ ಭಾನುವಾರ ಪ್ಯಾಲೆಸ್ತೀನ್‌ನ ರಫಾ ಹಾಗೂ ದಕ್ಷಿಣ ಗಾಜಾದ ವಿವಿಧೆಡೆ ದಾಳಿ ನಡೆಸಿದೆ ಎಂದು ಇಸ್ರೇಲಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಇಸ್ರೇಲ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆಯ ಪ್ರಕಾರ, ಈ ದಾಳಿಯನ್ನು ಹಮಾಸ್ ಸದಸ್ಯರೊಂದಿಗೆ ನಡೆದ ಗುಂಡಿನ ದಾಳಿಗೆ ಪ್ರತಿಯಾಗಿ ನಡೆಸಲಾಗಿದೆ. ರಫಾದಲ್ಲಿ ಐಇಡಿ ಸ್ಫೋಟಗೊಂಡು ಇಸ್ರೇಲಿ ಸೈನಿಕರಿಗೆ ಗಾಯಗಳಾಗಿದ್ದವು. ಅಲ್ಲದೇ ಈ ಘಟನೆಯ ಹಿಂದೆ ಇಸ್ರೇಲ್ ಸೇನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಸಶಸ್ತ್ರ ಗುಂಪಿನ ಕೈವಾಡವಿದೆ ಎಂದು ಕತಾರ್ ನಿಯಂತ್ರಣದ ಅಲ್ ಜಜೀರಾ ವಾಹಿನಿ ವರದಿ ಮಾಡಿದೆ.
AFP ವರದಿ ಪ್ರಕಾರ, ಇಸ್ರೇಲ್‌ನ ನಿಯಂತ್ರಣದಲ್ಲಿರುವ ರಫಾದ ದಕ್ಷಿಣ ಭಾಗದಲ್ಲಿ ಹಠಾತ್ ಹೋರಾಟ ಆರಂಭವಾದ ಬಳಿಕ ಎರಡು ವೈಮಾನಿಕ ದಾಳಿಗಳು ನಡೆದಿವೆ. ಹಮಾಸ್ ಯೋಧರು ಸ್ನೈಪರ್ ಹಾಗೂ ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇತ್ತ ಹಮಾಸ್ ಅನ್ನು ಸಂಪೂರ್ಣವಾಗಿ ನಿಶಸ್ತ್ರೀಕರಣ ಮತ್ತು ಪ್ಯಾಲೆಸ್ತೀನ್ ಪ್ರದೇಶವನ್ನು ಸಶಸ್ತ್ರೀಕರಣಗೊಳಿಸಿದಾಗ ಮಾತ್ರ ಗಾಜಾದಲ್ಲಿ ಯುದ್ಧ ಅಂತ್ಯವಾಗಲಿದೆ. ಸುಲಭವಾಗಲಿ, ಕಠಿಣವಾಗಲಿ.ಈ ಗುರಿ ಈಡೇರಿದಾಗ ಯುದ್ಧ ಕೊನೆಗೊಳ್ಳುತ್ತದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.