ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರನ್ನು ನಾಶ ಮಾಡಲು ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕಲಾಗುವುದು ಎಂದು ಇಸ್ರೇಲ್ ಸಚಿವರೊಬ್ಬರು ಹೇಳಿಕೆ ನೀಡಿ, ಬಳಿಕ ವಾಪಸ್ ಪಡೆದಿದ್ದಾರೆ. ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಚಿವರನ್ನು ಅಮಾನತುಗೊಳಿಸಿದ್ದಾರೆ.
ಹಮಾಸ್ ಆಳ್ವಿಕೆಯಲ್ಲಿರುವ ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕುವುದು ಸೇನೆಗಿರುವ ಒಂದು ಆಯ್ಕೆ ಎಂದು ಸಚಿವ ಅಮಿಚೈ ಎಲಿಯಾಹು ಹೇಳಿದ್ದರು. ಈ ಹೇಳಿಕೆ ಕುರಿತಾಗಿ ಇಸ್ರೇಲ್ ನಲ್ಲಿ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನೆತನ್ಯಾಹು ಅವರು ಸಚಿವರನ್ನು ಅನಿರ್ದಿಷ್ಟಾವಧಿಗೆ ಸರ್ಕಾರಿ ಸಭೆಗಳಿಂದ ಅಮಾನತುಗೊಳಿಸಿದ್ದಾರೆ.
ಸಚಿವರ ಹೇಳಿಕೆಯಿಂದಾಗಿ ಸರ್ಕಾರಕ್ಕೆ ಬಾರೀ ಒತ್ತಡಗಳು ಉಂಟಾದ ಕಾರಣ, ಪ್ರಧಾನಿ ನೆತನ್ಯಾಹು ಅವರು ಅನಿರ್ದಿಷ್ಟಾವಧಿಗೆ ಸರ್ಕಾರಿ ಸಭೆಗಳಿಂದ ಸಚಿವ ಎಲಿಯಾಹು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಎಲಿಯಾಹು ಅವರು ಯುದ್ಧದ ಕುರಿತಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಡಗಿರುವ ಭದ್ರತಾ ಕ್ಯಾಬಿನೆಟ್‌ನ ಭಾಗವಾಗಿರುವುದಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ.