ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು,
ಉತ್ತರ ಗಾಜಾದಿಂದ ದಕ್ಷಿಣಕ್ಕೆ ಸ್ಥಳಾಂತರಗೊಂಡ ನಾಗರಿಕರ ಬೆಂಗಾವಲು ಪಡೆ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 70 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಮತ್ತು 200 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಮೂಲದ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಅಲ್-ಝೈಟೌನ್ ನೆರೆಹೊರೆಯ ಸಲಾಹ್ ಅಲ್ದಿನ್ ಸ್ಟ್ರೀಟ್ ಮೂಲಕ ಸುಮಾರು 150 ನಾಗರಿಕರು ತೆರಳುವ ವೇಳೆ ಬೆಂಗಾವಲು ಪಡೆಯನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಗಾಜಾ ಪಟ್ಟಿಯ ದಕ್ಷಿಣ ಪ್ರದೇಶದಲ್ಲಿ ಆಶ್ರಯ ಪಡೆಯಲು ಇಸ್ರೇಲ್ ಕರೆ ಕೊಟ್ಟರೂ ಸಹ ಬಾಂಬ್ ಸ್ಫೋಟಗಳು ಪಟ್ಟಿಯಾದ್ಯಂತ ಇನ್ನೂ ಕೇಳಿಬರುತ್ತಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ತೀನಿಯರಿಗೆ 24 ಗಂಟೆಗಳೊಳಗೆ ದಕ್ಷಿಣಕ್ಕೆ ತೆರಳಲು ಎಚ್ಚರಿಕೆ ನೀಡಿತ್ತು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯ ವಿರುದ್ಧ ನಿರಂತರವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.