ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಸಂಘರ್ಷ ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿರುವ ಹೊಸ ಯೋಜನೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಭಾರೀ ವೈಮಾನಿಕ ದಾಳಿಗಳನ್ನು ನಡೆಸಿದೆ. ಇತ್ತೀಚಿನ ದಾಳಿಯಲ್ಲಿ ಕನಿಷ್ಠ 57 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು, ಇದರಿಂದ ಗಾಜಾದಲ್ಲಿ ಯುದ್ಧ ವಿರಾಮದ ನಿರೀಕ್ಷೆ ಮತ್ತೆ ಕತ್ತಲೆಯಾಗಿದೆ.
ದಕ್ಷಿಣ ಗಾಜಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾತ್ರ 29 ಜನರು ಬಲಿಯಾಗಿದ್ದಾರೆ. ಅವರಲ್ಲಿ 14 ಮಂದಿ ಇಸ್ರೇಲಿ ಸೇನೆಯ ಕಾರಿಡಾರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದೇರ್ ಅಲ್-ಬಲಾಹ್ ಪ್ರದೇಶದಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಬಾಂಬ್ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಬಸ್‌ಗಾಗಿ ಕಾಯುತ್ತಿದ್ದ ನಾಗರಿಕರ ಮೇಲೆ ನಡೆದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದಕ್ಕೂ ಮುನ್ನ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಗಾಜಾದ ಜನರಿಗೆ ಕೊನೆಯ ಎಚ್ಚರಿಕೆ ನೀಡಿದ್ದರು. “ಗಾಜಾ ತೊರೆಯುವವರಿಗೆ ಅವಕಾಶ ನೀಡಲಾಗಿದೆ, ಉಳಿದವರನ್ನು ಭಯೋತ್ಪಾದಕರಾಗಿಯೇ ಪರಿಗಣಿಸಲಾಗುವುದು” ಎಂದು ಎಚ್ಚರಿಸಿದ್ದರು. ಈ ಘೋಷಣೆಯ ಬಳಿಕವೂ ಸಾವಿರಾರು ಜನರು ಗಾಜಾದಲ್ಲಿಯೇ ಉಳಿದಿದ್ದಾರೆ.