ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಸಿರಿಯಾ ರಾಜಧಾನಿ ಡಮಾಸ್ಕಸ್‌ನ ನಗರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಈ ವೇಳೆ ಲೈವ್ ನೀಡುತ್ತಿದ್ದ ಟಿವಿ ನಿರೂಪಕಿ ಎದ್ದು ಓಡಿರುವ ದೃಶ್ಯ ಕಂಡುಬಂದಿದೆ.
ಸಿರಿಯಾ ಮೇಲಿನ ತನ್ನ ವಾಯುದಾಳಿಯನ್ನು ಮತ್ತಷ್ಟು ಹೆಚ್ಚಿಸಿರುವ ಇಸ್ರೇಲ್ ವಾಯುಸೇನೆ ಇದೀಗ ಸಿರಿಯಾ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದು, ಇದೇ ಸಂದರ್ಭದಲ್ಲಿ ಸುದ್ದಿ ಓದುತ್ತಿದ್ದ ಟಿವಿ ನಿರೂಪಕಿ ಜೀವ ಉಳಿಸಿಕೊಳ್ಳಲು ಲೈವ್ ಕಾರ್ಯಕ್ರಮ ಬಿಟ್ಟು ಓಡಿದ ವಿಡಿಯೋ ವೈರಲ್ ಆಗುತ್ತಿದೆ.
ದಕ್ಷಿಣ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಹೋರಾಟಗಾರರ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಇಸ್ರೇಲ್ ಸಿರಿಯಾವನ್ನು ಗುರಿಯಾಗಿಸಿಕೊಂಡು ಸತತ ಮೂರನೇ ದಿನ ದಾಳಿ ನಡೆಸಿದೆ.
ರಾಜಧಾನಿ ಡಮಾಸ್ಕಸ್‌ನ ಮಧ್ಯಭಾಗದಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡದ ಮೇಲೆ ಇಸ್ರೇಲ್ ಆಕ್ರಮಣ ವೈಮಾನಿಕ ದಾಳಿ ನಡೆದಿದೆ. ಇಸ್ರೇಲ್ ದಾಳಿ ಸುದ್ದಿ ಪ್ರಸ್ತುತ ಪಡಿಸುತ್ತಿರುವಾಗಲೇ ಸ್ಫೋಟ ಸಂಭವಿಸಿದ ಘಟನೆ ಕೂಡ ನಡೆದಿದೆ. ಸಿರಿಯಾ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ನಾಟಕೀಯ ಕ್ಷಣವನ್ನು ವರದಿ ಮಾಡುವಾಗ ಬಾಂಬ್ ಸ್ಫೋಟಿಸಿದ್ದು ಪತ್ರಕರ್ತ ಭಯಭೀತರಾಗಿ ಸ್ಥಳದಿಂದ ಓಡಿಹೋಗಿದ್ದಾರೆ.
ಇತ್ತ ಈ ಸುದ್ದಿಯನ್ನು ಸುದ್ದಿ ನಿರೂಪಕಿ ಪ್ರಸ್ತುತ ಪಡಿಸುತ್ತಿರುವಂತೆಯೇ ಸುದ್ದಿವಾಹಿನಿ ಕಟ್ಟಡದ ಹೊರಗೆ ದೊಡ್ಡ ಸ್ಫೋಟ ಸಂಭವಿಸಿದೆ. ಈ ವೇಳೆ ನಿರೂಪಕಿ ತನ್ನ ಜೀವ ಉಳಿಸಿಕೊಳ್ಳಲು ಲೈವ್ ಕಾರ್ಯಕ್ರಮ ಬಿಟ್ಟು ಓಡಿದ್ದಾರೆ.
ಕೆಲವು ದಿನಗಳ ಹಿಂದೆ ಇಸ್ರೇಲ್ ಮತ್ತು ಸಿರಿಯಾ ನಡುವೆ ಸಂಘರ್ಷ ದಿಢೀರ್ ಉಲ್ಬಣಗೊಂಡಿತು. ಉಭಯ ದೇಶಗಳ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಇಸ್ರೇಲ್ ದಕ್ಷಿಣ ಸಿರಿಯಾದಲ್ಲಿ ಸರ್ಕಾರಿ ಪಡೆಗಳ ಬೆಂಗಾವಲುಗಳ ಮೇಲೆ ಸರಣಿ ವಾಯುದಾಳಿಗಳನ್ನು ಪ್ರಾರಂಭಿಸಿದೆ.