ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯದಶಮಿ ಅಂಗವಾಗಿ ಕೇರಳದ ತಿರುವನಂತಪುರಂನಲ್ಲಿ ನಡೆದ ವಿದ್ಯಾರಂಭಂ ಆಚರಣೆಯಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ ಇಂದು ಭಾಗಿಯಾದರು.
ವಿಜಯದಶಮಿಯ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದೇನೆ. ವಿದ್ಯಾರಂಭ ಇದು ವರ್ಣಮಾಲೆಗಳನ್ನು ದೇವರು ಮತ್ತು ದೇವತೆಗಳಾಗಿ ಪೂಜಿಸುವ ಸಂಸ್ಕೃತಿಯಾಗಿದೆ. ಇಂದಿನ ದಿನ ಚಿಕ್ಕ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಆರಂಭಿಸಲಾಗುತ್ತದೆ. ಗುರುವಿನಿಂದ ಆಗುವ ಕಲಿಕೆಯನ್ನು ಪೂಜಿಸುವ ಪ್ರಕ್ರಿಯೆಯ ಮೂಲಕ ಮಕ್ಕಳು ಶಿಕ್ಷಣದ ಹೊಸ ಅಧ್ಯಾಯವನ್ನು ಆರಂಭಿಸುತ್ತಾರೆ ಎಂದು ಸೋಮನಾಥ್ ಹೇಳಿದರು.
ಜೀವಮಾನದಲ್ಲಿ ಮರೆಯಲಾಗದ ಅನುಭವ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಈ ಆಚರಣೆಯ ಭಾಗವಾಗಲು ನಿಜವಾಗಿಯೂ ಸಂತೋಷವಾಗಿದೆ. ಈ ಹಿಂದೆ ನನ್ನ ಪೋಷಕರು ಮತ್ತು ಅಜ್ಜಿಯರಿಂದ ನಾನು ಪಡೆದ ಜ್ಞಾನವನ್ನು ಯುವ ಪೀಳಿಗೆಗೆ ಸಾಗಿಸಲು ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ‘ವಿದ್ಯಾರಂಭಂ’ ಸಮಾರಂಭವನ್ನು ಸಾಮಾನ್ಯವಾಗಿ ನವರಾತ್ರಿಯ ಕೊನೆಯ ದಿನದಂದು ಆಚರಿಸಲಾಗುತ್ತದೆ. ಚಿಕ್ಕಮಕ್ಕಳಿಗೆ ಪ್ರಥಮ ಬಾರಿಗೆ ಔಪಚಾರಿಕ ಶಿಕ್ಷಣ ಆರಂಭಿಸುವ ಶುಭ ಘಳಿಗೆ ಇದಾಗಿದೆ.