ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ನಡೆಸಿದ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಂಎಸ್-03 ಉಡಾವಣೆ ಯಶಸ್ವಿಯಾಗಿದೆ.
4 ಸಾವಿರದ 410ಕೆ.ಜಿ. ತೂಕದ ಈ ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 5 ಗಂಟೆ 26 ನಿಮಿಷಕ್ಕೆ ಜಿಯೋ ಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಉಡಾವಣೆ ಮಾಡಲಾಗಿದೆ.
ಇದು ಎಲ್‌ವಿಎಂ3 ನ 5ನೇ ಕಾರ್ಯಾಚರಣೆ ಹಾರಾಟವಾಗಿದೆ. ಇದು ನೌಕಾಪಡೆಯ ಬಾಹ್ಯಾಕಾಶ ಆಧಾರಿತ ಸಂವಹನ ಮತ್ತು ಕಡಲ ಕ್ಷೇತ್ರದ ಜಾಗೃತಿ ಸಾಮರ್ಥ್ಯವನ್ನು ಬಲಪಡಿಸಲಿದೆ. ಭಾರತೀಯ ನೌಕಾಪಡೆಯ ಇದುವರೆಗಿನ ಅತ್ಯಂತ ಸುಧಾರಿತ ಸಂವಹನ ಉಪಗ್ರಹವಾಗಿದೆ.
ಸಿಎಂಎಸ್-03 ಬಹುಬ್ಯಾಂಡ್ ಮಿಲಿಟರಿ ಸಂವಹನ ಉಪಗ್ರಹ ವ್ಯವಸ್ಥೆಯಾಗಿದ್ದು, ಇದು ಭಾರತೀಯ ಭೂಪ್ರದೇಶ ಸೇರಿದಂತೆ ಸಾಗರ ಪ್ರದೇಶಗಳಲ್ಲಿನ ಸೇವೆಗಳನ್ನು ಒದಗಿಸಲಿವೆ ಎಂದು ಇಸ್ರೋ ತಿಳಿಸಿದೆ. ಎಲ್‌ವಿಎಂ೩ ೬೪೦ಟನ್ ತೂಕ ಹೊಂದಿದೆ. ಇದು ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. ನೆಹರು ತಾರಾಲಯದ ನಿರ್ದೇಶಕರಾದ ಡಾ. ಗುರು ಪ್ರಸಾದ್, ಇದು ಇತ್ತೀಚಿನ ದಿನಗಳಲ್ಲಿ ಭಾರತೀಯ ಆಂತರಿಕ್ಷ ಸಾಧಿಸಿರುವ ಮಹತ್ತರವಾದ ಸಾಧನೆಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ.

