ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಚಂದ್ರಯಾನದ ಯಶಸ್ವಿ ಸಾಧನೆಯ ಹಿಂದೆ ಭಾರತೀಯ ಸಂಶೋಧನೆ ಮತ್ತು ಬಾಹ್ಯಾಕಾಶ ಸಂಸ್ಥೆ (ಇಸ್ರೋ)ದ ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸಲು ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಬಂದಿದ್ದರು. ಇಸ್ರೋದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ವಿಜ್ಞಾನಿಗಳನ್ನು ಭೇಟಿಯಾಗಿ ಅವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಜೊತೆಗಿನ ಸಂಭಾಷಣೆ ಹೇಗಿತ್ತು ಎಂಬುದರ ಬಗೆಗೆ ಅಲ್ಲಿನ ಮಹಿಳಾ ವಿಜ್ಞಾನಿಗಳು ರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಹಿರಿಯ ವಿಜ್ಞಾನಿ ಮತ್ತು ಪ್ರಗ್ಯಾನ್ ಮಾಡ್ಯೂಲ್‌ನ ತಂಡದ ಸದಸ್ಯೆ ರೀಮಾ ಘೋಷ್ ಅವರು ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸಿದ ಅನುಭವದ ಬಗ್ಗೆ ಮಾತನಾಡಿ, ಪ್ರಧಾನಿಯವರೊಂದಿಗೆ ಮಾತನಾಡಿದ ಬಳಿಕ ʻನಮ್ಮ ಮಿತಿ ಆಕಾಶದವರೆಗೆ ಮಾತ್ರವಲ್ಲʼ ಎಂಬುದು ಅರ್ಥವಾಯಿತು. ಅವರ ಜೊತೆ ಮಾತನಾಡುತ್ತಿದ್ದರೆ ಸಮಯ ಹೋದದ್ದೇ ಗೊತ್ತಾಗಿಲ್ಲ ಎಂದರು.
ಇಸ್ರೋದ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಅವರು, “ಖಂಡಿತವಾಗಿಯೂ, ನಾವು ಇನ್ನೂ ಉತ್ತಮವಾದದ್ದನ್ನು ತರುತ್ತೇವೆ. ಆದಿತ್ಯ-ಎಲ್ 1 (ಇಸ್ರೋದ ಸೌರ ಮಿಷನ್) ಉಡಾವಣೆಯಾಗುವುದರಿಂದ ನಾವು ತುಂಬಾ ಉತ್ಸುಕರಾಗಿದ್ದೇವೆ. ನಾವು ಇನ್ಮುಂದೆ ಹೆಚ್ಚು ಸವಾಲಿನ ಕಾರ್ಯಾಚರಣೆಗಳನ್ನು ಸ್ವೀಕರಿಸುತ್ತೇವೆ” ಎಂಬ ವಿಶ್ವಾಸ ಹೊರಹಾಕಿದರು.
‘ಚಂದ್ರಯಾನ-3’ ಯೋಜನೆಯಲ್ಲಿ ಭಾಗಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಮಹಿಳಾ ವಿಜ್ಞಾನಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು, ಭಾರತದ ಚೊಚ್ಚಲ ಚಂದ್ರನ ಲ್ಯಾಂಡಿಂಗ್ ಮಿಷನ್‌ನ ಯಶಸ್ವಿ ಪರಾಕಾಷ್ಠೆಯಲ್ಲಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು.