ಯಡವನಾಡಿನಲ್ಲಿ 4.97 ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣಕ್ಕೆ ಹಕ್ಕು ಪತ್ರ ವಿತರಣೆ

ಹೊಸದಿಗಂತ ವರದಿ, ಕುಶಾಲನಗರ:

ಜಿಲ್ಲಾ ಗಿರಿಜನ ಸಮನ್ವಯ ಇಲಾಖೆಯ ವತಿಯಿಂದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ 142 ಜೇನು ಕುರುಬ ಕುಟುಂಬದವರಿಗೆ ಮನೆಗಳನ್ನು ನಿರ್ಮಿಸುವ ಸಂಬಂಧ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ .ಅಪ್ಪಚ್ಚು ರಂಜನ್ ಅವರು ಹಕ್ಕು ಪತ್ರಗಳನ್ನು ವಿತರಿಸಿದರು.
ಯಡವನಾಡು ಆಶ್ರಮ ಶಾಲೆಯಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಗಿರಿಜನ ಅಭಿವೃದ್ಧಿ ಯೋಜನೆಯಡಿ ಸಾವಿರಾರು ಪರಿಶಿಷ್ಟ ಪಂಗಡದ ಮತ್ತು ಜೇನು ಕುರುಬ ಸೇರಿದಂತೆ ವಿವಿಧ ಜಾತಿಯ ಕುಟುಂಬದವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಅದರಂತೆ ಈ ಸಾಲಿನಲ್ಲಿ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ವಿವಿಧ ಹಾಡಿಯ ಜೇನು ಕುರುಬ ಕುಟುಂಬದವರಿಗೆ 4. 97 ಕೋಟಿ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಗೃಹ ಮಂಡಳಿ ಸಹಯೋಗದಲ್ಲಿ ಒಬ್ಬ ಫಲಾನುಭವಿಗೆ ಮೂರೂವರೆ ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ವಿವಿಧ ಯೋಜನೆಯಡಿ ಹೈನುಗಾರಿಕೆಗೆ ಮತ್ತು ಕುರಿ ಸಾಕಾಣಿಕೆಗೆ ಸಹಕಾರ ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನೂ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ವಹಿಸಿದ್ದರು. ಇಲಾಖೆಯ ವತಿಯಿಂದ ಸಿಗುವ ಸೌಕರ್ಯಗಳ ಬಗ್ಗೆ ಗಿರಿಜನ ಸಮನ್ವಯ ಇಲಾಖೆಯ ಅಧಿಕಾರಿ ಹೊನ್ನೇಗೌಡ ಸಮಗ್ರವಾದ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರಾದ ಜೋಯಪ್ಪ, ದಾಮೋದರ್, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಚಂದ್ರು, ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚಂದ್ರಪ್ಪ, ಹಾಡಿಯ ನೂರಾರು ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!