ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ವಿಪರಿತವಾಗಿ ಏರಿಕೆ ಆಗಿದೆ.ಇನ್ನೂ ಕೆಲವು ದಿವಸಗಳು ಚಳಿ ವಾತಾವರಣ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಕರ್ನಾಟಕದ ದಕ್ಷಿಣ ಒಳನಾಡಿಗಿಂತಲೂ ಉತ್ತರ ಒಳನಾಡಿನಲ್ಲಿ (ಉತ್ತರ ಕರ್ನಾಟಕ) ಚಳಿ ಪ್ರಮಾಣ ಕೆಲವೇ ದಿನಗಳಲ್ಲಿ ಅಧಿಕವಾಗಿದೆ. ಮೂರು ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ಬಿಸಿಲಿನ ಜಳ ಇದ್ದರೂ ರಾತ್ರಿ ಅತ್ಯಧಿಕ ಚಳಿ ಕಂಡು ಬಂದಿದೆ. ಇಲ್ಲಿ ನಿತ್ಯ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ.
ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ ಬಾಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ 18-12 ಡಿಗ್ರಿ ಸೆಲ್ಸಿಯಸ್ ವರೆಗೆ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಆಗುವ ಮೂಲಕ ಇಲ್ಲೆಲ್ಲಾ ಚಳಿ ಸೃಷ್ಟಿಯಾಗಿದೆ.
ಕರ್ನಾಟಕದಲ್ಲಿ ಗುರುವಾರದಿಂದ ಚಳಿ ಆರಂಭವಾಗಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದು, ಈ ವರ್ಷ ಚಳಿಗಾಲದಲ್ಲಿ ಹೆಚ್ಚು ಚಳಿ ಇಲ್ಲದಿದ್ದರೂ ಉತ್ತರ ಕರ್ನಾಟಕದಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ, ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಅದನ್ನು ಅನುಭವಿಸುತ್ತಿವೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿಗೆ ಕಾರಣವೆಂದರೆ ಶೀತ ಗಾಳಿಯ ಪರಿಣಾಮ, ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ದಕ್ಷಿಣದ ಭಾಗದ ಜಿಲ್ಲೆಗಳಲ್ಲಿ ಮುಂಜಾನೆ ಅಲ್ಪ ಪ್ರಮಾಣದ ಚಳಿ ಇದ್ದು, ಬಳಿಕ ಬಿಸಿಲ ಕಾವು ಹೆಚ್ಚಾಗಿದೆ.