ಹೊಸದಿಗಂತ ವರದಿ ಮಂಡ್ಯ :
ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಹಳ್ಳಿಗಾಡಿನ ಜನರಿಗೆ ಉತ್ತಮ ಚಿಕಿತ್ಸೆ, ಔಷಧ ದೊರಕುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿನ ಅಶೋಕನಗರದಲ್ಲಿರುವ ಸ್ಪಂದನ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಆರೋಗ್ಯ ರಕ್ಷಾ ಕಾರ್ಡ್, ಜನಮಂಗಲ ಸಲಕರಣೆ ವಿತರಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ರೋಗವನ್ನು ಶೀಘ್ರ ಪತ್ತೆ ಮಾಡುವ ವ್ಯವಸ್ಥೆ ಇದೆ. ಉತ್ತಮ ಚಿಕಿತ್ಸಾ ವಿಧಾನ, ಅತ್ಯುತ್ತಮ ಔಷಧಗಳು ದೊರಕುತ್ತಿವೆ. ಅದೆಲ್ಲವೂ ಎಲ್ಲ ಜನರಿಗೆ ಸಕಾಲದಲ್ಲಿ ಸಿಗಬೇಕು. ನಗರ ಪ್ರದೇಶದ ಜನರಿಗೆ ದೊರೆಯುವ ಮಾದರಿಯಲ್ಲಿ ಹಳ್ಳಿಗಾಡಿನ ಜನರಿಗೆ ಅತ್ಯುತ್ತಮ ಚಿಕಿತ್ಸೆ, ಔಷಧಗಳು ಸಿಗುವಂತಾದಾಗ ಸಮಾಜ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ರೋಗವಿರಲಿ, ಆಕಸ್ಮಿಕವಾಗಿ ಸಂಭವಿಸಿದ ಅಪಘಾತಗಳಿರಲಿ ಅವರನ್ನು ಆದಷ್ಟು ಬೇಗ ಆಸ್ಪತ್ರೆ ತಲುಪುವಂತೆ ಮಾಡಿ ಚಿಕಿತ್ಸೆ ದೊರಕಿಸಿದರೆ ಅವರ ಆಯಸ್ಸು ಹೆಚ್ಚಾಗುತ್ತದೆ. ಇಂದಿನ ದಿನಗಳಲ್ಲಿ ವ್ಯಕ್ತಿಗೆ ಬಂದಿರಬಹುದಾದ ರೋಗ ಇಂತಹದ್ದೇ ಎಂದು ನಿರ್ದಿಷ್ಟವಾಗಿ ಹೇಳಬಹುದು. ಅದರ ತೀವ್ರತೆಯನ್ನು ನಿಖರವಾಗಿ ಗುರುತಿಸಿ ಇಷ್ಟೇ ಪ್ರಮಾಣದ ಔಷಧ ನೀಡಿ ರೋಗ ಗುಣಪಡಿಸಬಹುದು ಎಂದು ಹೇಳುವ ಸಾಮರ್ಥ್ಯ ವೈದ್ಯರಲ್ಲಿದೆ. ಅದಕ್ಕಾಗಿ ಹೆದರುವ ಅಗತ್ಯವಿಲ್ಲ ಎಂದರು.
ಸಿ.ಟಿ.ಸ್ಕ್ಯಾನ್ ಯಂತ್ರ ಗ್ರಾಮೀಣ ಜನರು ಸೇರಿದಂತೆ ಎಲ್ಲ ಜನರಿಗೆ ಅನುಕೂಲಕರವಾದದ್ದು. ಅದರ ಮೂಲಕ ರೋಗಿಯ ಸಮಸ್ಯೆಯನ್ನು ಶೀಘ್ರ ಗುರುತಿಸಿ ಚಿಕಿತ್ಸೆ ನೀಡಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಸಿ.ಟಿ.ಸ್ಕ್ಯಾನ್ ಇದ್ದುದರಿಂದ ನಮ್ಮ ಸಂಸ್ಥೆಯ ಸಿಬ್ಬಂದಿಯೊಬ್ಬರ ಪತ್ನಿಯ ಜೀವ ಉಳಿಯಿತು. ಆನಂತರದಲ್ಲಿ ಸಿ.ಟಿ.ಸ್ಕ್ಯಾನ್ ಮಹತ್ವವನ್ನು ಅರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆ ಯಂತ್ರವನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದೆವು ಎಂದು ಹೇಳಿದರು.