ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ಎರಡು ವರ್ಷದ ಬಾಲಕ ಸಾತ್ವಿಕ್ ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರಕ್ಕೆ ಬರಲಿ ಎಂದು ರಾಜ್ಯಾದ್ಯಂತ ನೂರಾರು ಜನ ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಫಲಿಸಿದ್ದು, ಸಾತ್ವಿಕ್ ಜೀವಂತವಾಗಿ ಹೊರ ಬಂದಿದ್ದಾನೆ. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗು ಬಿದ್ದಿದ್ದು ಹೇಗೆ?
ಸಾತ್ವಿಕ್ ತಾತ ನೀರಿಗಾಗಿ ಕೊಳವೆ ಬಾವಿ ಕೊರೆಸಿದ್ದರು. ಸಾತ್ವಿಕ್ ತಂದೆ ನೀರನ್ನು ನೋಡಿಕೊಂಡು ಬರಲು ಕೊಳವೆ ಬಾವಿ ಬಳಿ ಬಂದಿದ್ದರು. ಸಾತ್ವಿಕ್ ತನ್ನ ತಂದೆಯನ್ನು ಹಿಂಬಾಲಿಸಿದ್ದ. ಎರಡು ಬಾವಿಗಳಲ್ಲಿ ಒಂದರ ಬಳಿ ಸಾತ್ವಿಕ್ ತಂದೆ ನಿಂತಿದ್ದರು. ಓಡಿ ಬಂದ ಸಾತ್ವಿಕ್ ಇನ್ನೊಂದು ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ.
ಅಲ್ಲಿದ್ದಾನೆ ಎಂದು ಗೊತ್ತಾಗಿದ್ದು ಹೇಗೆ?
ಮಗು ಕಾಣದ ಕಾರಣ ಮನೆಯವರೆಲ್ಲ ಗಾಬರಿಯಾಗಿ ಹುಡುಕಾಡಿದ್ದಾರೆ,ಕಡೆಯ ಬಾರಿಗೆ ತಂದೆಯ ಜೊತೆ ಸಾತ್ವಿಕ್ ಇದ್ದ. ತನ್ನನ್ನು ಹಿಂಬಾಲಿಸಿರಬಹುದು ಎನ್ನುವ ಅನುಮಾನದಲ್ಲಿ ಜಮೀನನ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸಾತ್ವಿಕ್ ಕಾಣಿಸಿಲ್ಲ. ನಂತರ ಕೊಳವೆ ಬಾವಿಗೆ ಬಿದ್ದಿರಬಹುದೇ ಎಂದು ಸಾತ್ವಿಕ್ ತಂದೆಗೆ ಅನುಮಾನ ಬಂದಿದೆ. ಬಾವಿಯ ಬಳಿ ಬಗ್ಗಿ ನೋಡಿದಾಗ ಸಾತ್ವಿಕ್‌ನ ಗೆಜ್ಜೆಯ ಸದ್ದು ಕೇಳಿದೆ. ಮಗು ಬಾವಿಗೆ ಬಿದ್ದಿರುವುದು ದೃಢಪಟ್ಟಿದ್ದು, ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.