ಹೊಸದಿಗಂತ ವರದಿ: ಮೈಸೂರು:
ಕೇಂದ್ರ ಸರ್ಕಾರ ತೆರಿಗೆ ಪಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್‌ನವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅವರು, ಕೇಂದ್ರದಿoದ ನಾವು ಎಲ್ಲವನ್ನೂ ಕರ್ನಾಟಕ ರಾಜ್ಯಕ್ಕೆ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಕಾಂಗ್ರೆಸ್‌ನವರು ಕೊಟ್ಟಿಲ್ಲ ಎನ್ನುತ್ತಾರೆ. ಸಮಸ್ಯೆ ಏನೇ ಇದ್ದರು ಕೂತು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ, ರಾಜ್ಯ ಸರ್ಕಾರ ಕೊಟ್ಟಿಲ್ಲ ಅಂತ ಹೇಳಿ ಪ್ರತಿಭಟನೆ ಮಾಡಲು ಮುಂದಾಗಿರುವುದು ಸರಿಯಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಕಿದ್ದ ಕೇಸರಿ ಟವೆಲ್ ಬಿಜೆಪಿಯವರ ಟವಲ್ ಅಲ್ಲ . ಅದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಆಂಜನೇಯನ ಭಕ್ತ ನೀಡಿದ ಶಾಲು. ಆದರೆ, ಕಾಂಗ್ರೆಸ್ ನವರು ಅದನ್ನೇ ದೊಡ್ಡದು ಮಾಡಿದ್ದಾರೆ ಅಷ್ಟೆ ಎಂದರು.
ಚುನಾವಣೆಗೆ ಮಾತ್ರ ಮೈತ್ರಿ
ಬಿಜೆಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಮಾತ್ರವಷ್ಟೆ. ಅದನ್ನು ಹೊರತು ಪಡಿಸಿ ನಮ್ಮ ತತ್ವ ಸಿದ್ದಾಂತವೇ ಬೇರೆ ಬಿಜೆಪಿ ತತ್ವ ಸಿದ್ದಾಂತವೇ ಬೇರೆ ಎಂದು ಸ್ಪಷ್ಟಪಡಿಸಿದರು.
ಜನತಾ ಪಕ್ಷ ಕಟ್ಟಿದ ಜಯ ಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ಮೈತ್ರಿ ಮಾಡಿಕೊಂಡಿರುವ ಮಾತ್ರಕ್ಕೆ ನಮ್ಮ ತತ್ವ ಸಿದ್ಧಾಂತ ಒಂದಿoಚು ಕೂಡ ಬದಲಾಗಲ್ಲ. ಬಿಜೆಪಿಯವರದು ಅವರಿಗೆ, ನಮ್ಮದು ನಮಗೆ. ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ ಎಂದು ತಿಳಿಸಿದರು.