ಹೊಸದಿಗಂತ ವರದಿ, ಚಿತ್ರದುರ್ಗ:
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹಾಗಾಗಿ ಯಾರೇ ತಪ್ಪು ಮಾಡಿದರೂ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರ ನಟನೆಯ ಬಗ್ಗೆ ನನಗೆ ಗೌರವವಿದೆ. ಒಬ್ಬ ನಟನಾಗಿ ಸಂಯಮದಿಂದ ನಡೆದುಕೊಳ್ಳಬೇಕಿತ್ತು. ಕಾನೂನು ಕೈಗೆ ತೆಗೆದುಕೊಂಡದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ವಯಸ್ಸಾದ ತಂದೆ, ತಾಯಿ ಇದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಮದುವೆಯಾಗಿ ಈಗಷ್ಟೆ ಒಂದು ವರ್ಷವಾಗತ್ತಿದೆ. ಆತನ ಪತ್ನಿ ಐದು ತಿಂಗಳ ಗರ್ಭಿಣಿ ಇಂತಹ ಪರಿಸ್ಥಿತಿಯಲ್ಲಿ ಅವರನ್ನು ನೋಡಿಕೊಳ್ಳುವವರು ಯಾರು. ಮನೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ದಿಕ್ಕು ಕಾಣದಾಗಿದೆ. ಹಾಗಾಗಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಸಚಿವರು, ರಾಜಕಾರಣಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.