ಹೊಸದಿಗಂತ ವರದಿ, ಹುಬ್ಬಳ್ಳಿ:
ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದೇಶ ಜನರ ಮೇಲೆ ದಾಳಿ ನಡೆಸಿದರೂ ಸಹ ಪಾಕಿಸ್ತಾನ ಮೇಲೆ ಯುದ್ಧ ಬೇಡಾ ಅನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಓಲೈಕೆಯ ಗುಂಗಿನಿಂದ ಹೊರಬಂದಿಲ್ಲ ಎಂದು ಶಾಸಕ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆ ವಿಷಯ ಬಂದಾಗ ಧರ್ಮ, ಜಾತಿ ಇರಬಾರದು. ಪಾಕಿಸ್ತಾನದ ವಿರುದ್ಧ ಯುದ್ಧ ನಡೆದರೆ ರಾಜ್ಯದ ಮುಸ್ಲಿಮರು ಏನೆಂದುಕೊಳ್ಳುತ್ತಾರೋ ಎಂದು ಅವರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಭಯೋತ್ಪಾದಕರು ಧರ್ಮದ ಹೆಸರು ಕೇಳಿ ಗುಂಡು ಹೊಡೆದಿಲ್ಲ ಎಂದು ಮುಖ್ಯಮಂತ್ರಿ ಅವರ ಕೃತ್ಯ ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಭಯೋತ್ಪಾದಕರಿಗೆ ಅವರಿಗೆ ಯಾವ ವ್ಯತ್ಯಾಸವೂ ಇಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನವನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕೇಂದ ಸರ್ಕಾರ ದೇಶ ಭದತ್ರೆ ನೀಡಲು ಸರ್ಕಾರ ಸಮರ್ಥವಾಗಿದೆ. ಕಾಂಗ್ರೆಸ್ ಆಡಳಿತವಿದ್ದಾಗ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿಯಿತ್ತು, ಬಿಜೆಪಿ ಆಡಳಿತವಿದ್ದಾಗ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದರೆ, ಅವರದ್ದೇ ಪಕ್ಷದ ಸಚಿವ ಸಂತೋಷ ಲಾಡ್ ಅದರ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.