ರಾಮಮಂದಿರ, ಹೊಸ ಸಂಸತ್ ಕುರಿತು ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ: ಎನ್​ಸಿಇಆರ್​ಟಿ ನಿರ್ದೇಶಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿಯು (NCERT) 12ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ರಾಜಕೀಯ ಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಿದೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.

ಬಾಬ್ರಿ ಮಸೀದಿ ಉಲ್ಲೇಖ ತೆಗೆದುಹಾಕಿದ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ ಅವರು ಪ್ರತಿಕ್ರಿಯಿಸಿದ್ದಾರೆ.’ವಿದ್ಯಾರ್ಥಿಗಳು ಏಕೆ ಗಲಭೆ, ಹಿಂಸಾಚಾರ ಸೇರಿ ಹಲವು ನಕಾರಾತ್ಮಕ ಅಂಶಗಳ ಕುರಿತು ಕಲಿಯಬೇಕು. ಗುಜರಾತ್‌ ಹಿಂಸಾಚಾರ, ಬಾಬ್ರಿ ಮಸೀದಿ ನೆಲಸಮ ಸೇರಿ ಹಲವು ಅಂಶಗಳ ಕುರಿತು ಏಕೆ ಅಧ್ಯಯನ ಮಾಡಬೇಕು. ಅಷ್ಟಕ್ಕೂ, ನಾವು ಪಠ್ಯವನ್ನು ತಯಾರಿಸುವಾಗ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಿಲ್ಲ. ತಜ್ಞರ ಶಿಫಾರಸಿನಂತೆ ಬದಲಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

ಬಾಬ್ರಿ ಮಸೀದಿ ಬದಲು ಮೂರು ಅಂತಸ್ತಿನ ಗುಮ್ಮಟ ಎಂದು ಪ್ರಸ್ತಾಪಿಸಿರುವುದು, ಗುಜರಾತ್‌ ಹಿಂಸಾಚಾರವನ್ನು ಕೈಬಿಟ್ಟಿರುವುದು ಸೇರಿ ಹಲವು ಅಂಶಗಳನ್ನು ಕೈಬಿಟ್ಟಿರುವ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದಾಗ್ಯೂ, ಎನ್‌ಸಿಇಆರ್‌ಟಿಯು ಬಳಿಕ ಸ್ಪಷ್ಟನೆ ನೀಡಿದೆ.

ಇನ್ನು ಶಿಕ್ಷಣದಲ್ಲಿ ಕೇಸರೀಕರಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ಈ ಸಂದರ್ಭದಲ್ಲಿ ತಳ್ಳಿಹಾಕಿದ್ದಾರೆ.

ಹನ್ನೆರಡನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಾಬ್ರಿ ಮಸೀದಿಯನ್ನು ಮೂರು ಗೋಪುರದ ಕಟ್ಟಡವೆಂದು ಬಣ್ಣಿಸಲಾಗಿದೆ. ಅಯೋಧ್ಯೆಯ ಪಾಠವನ್ನು ನಾಲ್ಕು ಪುಟಗಳಿಂದ ಎರಡು ಪುಟಕ್ಕೆ ಇಳಿಸಲಾಗಿದೆ. ಲಾಲಕೃಷ್ಣ ಆಡ್ವಾನಿ ನೇತೃತ್ವದಲ್ಲಿ ನಡೆದ ಬಿಜೆಪಿ ರಥಯಾತ್ರೆ ಘಟನೆಯನ್ನು ಉಲ್ಲೇಖಿಸಲಾಗಿದೆ. ಕರಸೇವಕರಿಂದ ಬಾಬ್ರಿ ಮಸೀದಿ ಕೆಡವಲಾಗಿದ್ದು ಆ ಸಂಬಂಧಿತ ಘಟನೆಗಳ ವಿವರ ಕೊಡಲಾಗಿದೆ. ವಿಪಕ್ಷಗಳ ನಾಯಕರು ಈ ಪಠ್ಯ ಪರಿಷ್ಕರಣೆಯನ್ನು ಕೇಸರೀಕರಣ ಎಂದು ಆರೋಪ ಮಾಡಿದ್ದಾರೆ.

ಯಾವುದಾದರೂ ಅಪ್ರಸ್ತುತ ವಿಷಯವಾಗಿದ್ದರೆ ಅದನ್ನು ಅಪ್​ಡೇಟ್ ಮಾಡಬೇಕಾಗುತ್ತದೆ. ಬದಲಾವಣೆಯನ್ನೇ ಮಾಡಬಾರದು ಎಂದು ಹೇಳಲು ಆಗಲ್ಲ. ಈ ಪರಿಷ್ಕರಣೆಯನ್ನು ಕೇಸರೀಕರಣ ಎಂದು ಕರೆಯಲಾಗದು. ನಾವು ಮಕ್ಕಳಿಗೆ ಇತಿಹಾಸ ಹೇಳಿಕೊಡುವುದು ನೈಜ ಜ್ಞಾನವನ್ನು ತುಂಬಲೇ ಹೊರತು, ಘರ್ಷಣೆಗೆ ನೂಕುವುದಕ್ಕಲ್ಲ ಎಂದು ದಿನೇಶ್ ಪ್ರಸಾದ್ ಸಾಕ್ಲಾನಿ ಹೇಳಿದ್ದಾರೆ.

ರಾಮ ಮಂದಿರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಅದನ್ನು ನಮ್ಮ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ಯಾಕೆ ತಪ್ಪಾಗುತ್ತದೆ? ಹೊಸ ಸಂಸತ್ ಅನ್ನು ಕಟ್ಟಿದ್ದಾರೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬಾರದೇಕೆ? ಪ್ರಾಚೀನ ಘಟನೆಗಳ ಜೊತೆಗೆ ಇತ್ತೀಚಿನ ವಿದ್ಯಮಾನಗಳನ್ನೂ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!