ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದಲ್ಲಿ ಎಷ್ಟೇ ಹಬ್ಬಗಳು ಬಂದರೂ ಅಣ್ಣ ತಂಗಿಯರಿಗೆ ರಕ್ಷಾ ಬಂಧನವೇ ನೆಚ್ಚಿನ ಹಬ್ಬ. ಸದಾ ನಿನ್ನನ್ನು ರಕ್ಷಿಸುತ್ತೇನೆ, ನಾನೇ ನಿನಗೆ ರಕ್ಷೆ ಎಂದು ಅಣ್ಣ ಪ್ರೀತಿಯಿಂದ ತಂಗಿಯ ತಲೆ ಸವರುತ್ತಾನೆ. ತಂಗಿಯೂ ಅಣ್ಣನ ಸುರಕ್ಷತೆಗಾಗಿ, ನನ್ನನ್ನೂ ಸುರಕ್ಷಿವಾಗಿ ನೋಡಿಕೊ ಎಂದು ಪ್ರೀತಿಯಿಂದ ರಾಖಿ ಕಟ್ಟಿ ಸಂತಸಪಡುವ ಹಬ್ಬವಿದು.. ಅಣ್ಣ ತಂಗಿಯರ ಬಾಂಧವ್ಯ ಕಂಡು ಪೋಷಕರ ಕಣ್ಣಾಲೆಗಳು ಒದ್ದೆಯಾಗುತ್ತವೆ.
ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಬಳಿಕ ಬರುವ ಮತ್ತೊಂದು ಪವಿತ್ರ ಹಬ್ಬ ಈ ರಕ್ಷಾ ಬಂಧನ.
ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ಸಂದರ್ಭ ಮಾರುಕಟ್ಟೆಯಲ್ಲಿ ಅನೇಕ ಶೈಲಿಯ ರಾಖಿಗಳು ಕಾಣಸಿಗುತ್ತವೆ. ರಾಖಿ ಅಥವಾ ರಕ್ಷೆಯನ್ನು ಕಟ್ಟುವ ಮೂಲಕ ಪ್ರತಿಯೊಬ್ಬ ಅಣ್ಣ-ತಂಗಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ. ಅಣ್ಣನನ್ನು ಕೂರಿಸಿ ಆತನಿಗೆ ಕುಂಕುಮ ಹಚ್ಚಿ, ರಾಖಿ ಕಟ್ಟಿ ನಂತರ ಸಿಹಿ ತಿನ್ನಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಖಿ ಕಟ್ಟಿಸಿಕೊಂಡ ಖುಷಿಗೆ ಅಣ್ಣನೂ ತಂಗಿಗೆ ಪ್ರೀತಿಯ ಉಡುಗೊರೆ ನೀಡುತ್ತಾನೆ.