-ಗಣೇಶ ಭಟ್, ಗೋಪಿನಮರಿ
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||
ʼಸ್ವಧರ್ಮೇ ನಿಧನಂ ಶ್ರೇಯಃʼ ಅಂದರೆ ‘ಸ್ವಧರ್ಮದಲ್ಲಿ ಸಾಯುವುದೇ ಮೇಲು..’ ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಬೋಧಿಸಿದ ಗೀತೆಯ ಈ ಸಾಲು, ಭಾರತೀಯ ಸೇನೆಯ ಹೆಮ್ಮೆಯ ರೆಜಿಮೆಂಟುಗಳಲ್ಲೊಂದಾದ ಮದ್ರಾಸ್ ರೆಜಿಮೆಂಟಿನ ಘೋಷವಾಕ್ಯ. ಯೋಧನಾದವನಿಗೆ ಹೋರಾಡುವುದೇ ಧರ್ಮ. ಸೈನಿಕನೊಬ್ಬ ಸ್ವಧರ್ಮೇ ನಿಧನಂ ಶ್ರೇಯಃ ಎಂದು ಹೇಳುತ್ತಿರೋದರ ಹಿಂದಿನ ಅರ್ಥವನ್ನು ನಾವು “ಹೋರಾಡುತ್ತ ಸಾಯುವುದೇ ಮೇಲು” ಎಂದು ಅರ್ಥೈಸಿಕೊಳ್ಳಬಹುದು. ಇಂದಿಗೂ ಭಾರತೀಯ ಸೇನೆಯ ಪ್ರತಿಯೊಬ್ಬ ಜೀವನದ ಅತಿದೊಡ್ಡ ಗುರಿಯೆಂದರೆ ಇದೆ. ಸ್ವಂತವೆಲ್ಲವನ್ನೂ ಮರೆತು ತಾಯಿ ಭಾರತಿಯ ರಕ್ಷಣೆಯ ಯಜ್ಞದಲ್ಲಿ ನಗುತ್ತ ಪ್ರಾಣಾರ್ಪಣೆ ಮಾಡಬೇಕೆಂಬ ಆಸೆ ಪ್ರತಿಯೊಬ್ಬ ಯೋಧನಿಗಿರುತ್ತದೆ. ಇದೇ ಶ್ರದ್ಧೆಯಿಂದಲೇ ಆತ ಕೊರೆವ ಚಳಿಯೋ, ಸುಡುವ ಬಿಸಿಲೋ, ನೆನೆವ ಮಳೆಯೋ ಒಂದನ್ನೂ ಲೆಕ್ಕಿಸದೇ ಗಡಿಯಲ್ಲಿ ಗೋಡೆಯಾಗಿ ನಿಂತುಬಿಡುತ್ತಾನೆ. ಇಂದಿಗೂ ನಾವು ನಮ್ಮ ಮನೆಗಳಲ್ಲಿ ಹಾಯಾಗಿ ನಿದ್ರಿಸುತ್ತೇವೆಂದರೆ ಗಡಿಯಲ್ಲಿರುವ ಯೋಧನ ತ್ಯಾಗವೇ ಕಾರಣ. ಅಂತಹ ಕೆಲ ವೀರರಲ್ಲಿ ಕೆಲವೇ ಕೆಲವರು ಶತ್ರುವನ್ನು ಮಟ್ಟ ಹಾಕುವಲ್ಲಿ ಪರಾಕ್ರಮ ಮೆರೆದು ʼಪರಮ ವೀರʼರು ಎನ್ನಿಕೊಳ್ಳುತ್ತಾರೆ. ಅಂಥಹ ಪರಮವೀರರಲ್ಲೊಬ್ಬರು ʼಲೆಫ್ಟಿನೆಂಟ್ ಕರ್ನಲ್. ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್ʼ.
ಹುಟ್ಟಿದ್ದು 1923 ರಲ್ಲಿ ಮುಂಬೈನಲ್ಲಿ. ಅಂದು ಮೊಘಲರನ್ನು ಮೆಟ್ಟಿ ವಿಸ್ತಾರವಾದ ಸ್ವರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ನೆಚ್ಚಿನ ಸೇನೆಯಲ್ಲಿದ್ದವರ ವಂಶಕ್ಕೆ ಸೇರಿದವರಿವರು. ಇವರ ಪೂರ್ವಜ ರತನ್‌ಜೀಬಾ ಎಂಬುವವರು ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಅಪ್ರತಿಮವಾಗಿ ಹೋರಾಡಿದ್ದರು. ಅವರ ಪರಾಕ್ರಮವನ್ನು ಮೆಚ್ಚಿ ಅಂದು ಶಿವಾಜಿ ಮಹಾರಾಜರು ರತನ್‌ಜೀಬಾ ಎಂಬುವವರಿಗೆ ನೂರು ಹಳ್ಳಿಗಳ ಮೇಲುಸ್ತುವಾರಿ ನೀಡಿದ್ದರೆಂತೆ. ಆಗಿನಿಂದಲೂ ಇವರ ಕುಟುಂಬಕ್ಕೆ ತಾರಾಪೋರ್ ಎಂಬ ಉಪನಾಮ ಜೋಡಿಸಲ್ಪಟ್ಟಿದೆ. ಹೀಗಾಗಿ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್ ಅವರಿಗೆ ಹುಟ್ಟಿನಿಂದಲೇ ಕ್ಷತ್ರಿಯ ಗುಣ ರಕ್ತಗತವಾಗಿತ್ತು. ಶಿಕ್ಷಣವನ್ನು ಪೂರೈಸಿದ ನಂತರ 1942ರಲ್ಲಿ ಸೇನೆಗೆ ಸೇರಿದ ಇವರನ್ನು ಮದ್ರಾಸ್ ಇನ್‌ಫಂಟ್ರಿಗೆ ನಿಯುಕ್ತಿಗೊಳಿಸಲಾಗಿತ್ತು. ಆದರೆ ಇವರು ಶಸ್ತ್ರಸಜ್ಜಿತ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ಬಯಸಿದ್ದರು.
ಒಮ್ಮೆ ಎಂದಿನಂತೆ ತರಬೇತಿಯಲ್ಲಿ ತೊಡಗಿದ್ದಾಗ ಸಹ ಸೈನಿಕನೊಬ್ಬ ಗ್ರೇನೇಡು ಎಸೆಯುವಾಗ ಗುರಿ ತಪ್ಪಿ ಹತ್ತಿರದಲ್ಲೇ ಬಿದ್ದಿತ್ತು. ಅದನ್ನುನೋಡಿದ ತಾರಾಪೋರ್ ಕೂಡಲೇ ಓಡಿ ಹೋಗಿ ಅನಾಹುತ ತಪ್ಪಿಸಲು ಗ್ರೆನೇಡನ್ನು ದೂರ ಎಸೆಯಲು ಯತ್ನಿಸಿದರು. ದುರದೃಷ್ಟವಶಾತ್ ಅವರ ಕೈಯಿಂದ ತಪ್ಪಿದ ಕೂಡಲೇ ಗ್ರೆನೇಡು ಸ್ಫೋಟಗೊಂಡಿತ್ತು. ಅವರ ಎದೆಯೆ ಭಾಗದಲ್ಲಿ ಗಾಯವಾಗಿತ್ತು. ಅವರ ಈ ಪರಾಕ್ರಮವನ್ನು ನೋಡಿದ್ದ ಬ್ರಿಟೀಷ್ ಭಾರತೀಯ ಸೇನೆಯ ರಾಜ್ಯ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿದ್ದ ಮೇಜರ್ ಜನರಲ್ ಎಡ್ರೂಸ್ ಅವರನ್ನು ವೈಯುಕ್ತಿಕವಾಗಿ ಅಭಿನಂದಿಸಿ ಕೋರಿಕೆಯಂತೆ ತಾರಾಪೋರ್ ಅವರನ್ನು ಶಸ್ತ್ರಸಜ್ಜಿತ 1 ನೇ ಹೈದರಾಬಾದ್ ಇಂಪೀರಿಯಲ್ ಸರ್ವಿಸ್ ಲ್ಯಾನ್ಸರ್ಸ್ ಗೆ ನಿಯೋಜಿಸಿದರು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಮಧ್ಯಪ್ರಾಚ್ಯ ಪ್ರದೇಶಕ್ಕೆ ಇವರನ್ನು ವರ್ಗಾಯಿಸಲಾಗಿತ್ತು. ಭಾರತ ಸ್ವತಂತ್ರವಾಗಿ 1951ರಲ್ಲಿ ಮದ್ರಾಸ್ ಭಾರತದಲ್ಲಿ ವಿಲೀನವಾದ ನಂತರ ಭಾರತೀಯ ಸೇನೆಯಲ್ಲಿ ಮುಂದುವರೆದ ಅವರು ಸೇನೆಯ ಶಸ್ತ್ರಸಜ್ಜಿತ ಘಟಕವಾದ 17ನೇ ಪೂನಾ ಹಾರ್ಸ್ ಘಟಕಕ್ಕೆ ಕಮಾಂಡಿಂಗ್ ಆಫೀಸರ್ ಆಗಿ ನಿಯುಕ್ತಿಗೊಂಡರು.
1947-48ರ ಯುದ್ಧದಲ್ಲಿಯೇ ಭಾರತದ ಪಡೆಗಳೆದುರು ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ಇನ್ನೂ ಬುದ್ಧಿ ಕಲಿತಿರಲಿಲ್ಲ. 1965ರಲ್ಲಿ ಕಾಶ್ಮೀರದಲ್ಲಿ ಒಳನುಸುಳಿ ಅಲ್ಲಿದ್ದ ಮುಸ್ಲಿಮರನ್ನು ಪ್ರಚೋದಿಸಿ ಅಲ್ಲಿ ಭಾರತದ ವಿರುದ್ಧ ದಂಗೆಯಾಗುವಂತೆ ಮಾಡುವ ಕುತಂತ್ರದೊಂದಿಗೆ ಪಾಕಿಸ್ತಾನವು ʼಆಪರೇಷನ್ ಜಿಬ್ರಾಲ್ಟರ್ʼ ಅನ್ನು ಜಾರಿಗೊಳಿಸಿತ್ತು. ಆದರೆ ಇದರ ವಾಸನೆ ಸಿಕ್ಕ ಭಾರತೀಯ ಸೇನೆ ತನ್ನ ಹೆಚ್ಚಿನ ಪಡೆಗಳನ್ನು ಕಾಶ್ಮೀರಕ್ಕೆ ಕಳುಹಿಸಿ ಈ ನುಸುಳುಕೋರರ ವಿರುದ್ಧ ದಾಳಿ ನಡೆಸಿತು. ಆಗ ತಾರಾಪೋರೆ ಅವರೂ ಕೂಡ ಸೇನೆಯ ಭಾಗವಾಗಿ ಅಲ್ಲಿನ ಸಿಯಾಲ್ಕೋಟ್ ಪ್ರದೇಶದ ಚಾವಿಂಡಾ ಮತ್ತು ಫಿಲೋರಾವನ್ನು ವಶಪಡಿಸಿಕೊಳ್ಳಲು ಧಾವಿಸಿದರು. ಅದಾಗಲೇ ಪಾಕಿಸ್ತಾನಿಗಳು ಇವೆರಡು ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಹಿಂದಿನಿಂದ ಚಿರತೆಗಳಂತೆ ತಾರಾಪೋರ್ ನೇತೃತ್ವದ ಪೂನಾ ಹಾರ್ಸ್ ಸೈನಿಕರು ಪಾಕಿಸ್ತಾನಿಗಳ ಮೇಲೆ ಭೀಕರ ದಾಳಿ ನಡೆಸಿದರು. ಪಾಕಿಸ್ತಾನಿಗಳು ಅದಾಗಲೇ ಆಯಕಟ್ಟಿನ ಪ್ರದೇಶದಲ್ಲಿ ಅಡಗಿ ಕೂತಿದ್ದರಿಂದ ಅವರೂ ಪ್ರತಿದಾಳಿ ನಡೆಸಿದರು. ಇಬ್ಬರ ನಡುವೆಯೂ ಭಯಾನಕ ಗುಂಡಿನ ಕಾಳಗ ನಡೆಯಿತು. ಆದರೆ ತಾರಾಪೂರ್ ಅವರ ದಾಳಿ ಹೇಗಿತ್ತೆಂದರೆ ಶತ್ರು ಸೈನಿಕರ 13 ಯುದ್ಧ ಟ್ಯಾಂಕ್ ಗಳು ನಾಶವಾಗಿದ್ದವು. ಪಾಕಿಸ್ತಾನಿಗಳು ಚಾವಿಂಡ ಮತ್ತು ಫಿಲೋರಾ ಪ್ರದೇಶದಿಂದ ಕಾಲ್ಕಿತ್ತಿದ್ದರು. ಇವೆರಡೂ ಪ್ರದೇಶಗಳು ಭಾರತೀಯ ಸೇನೆಯ ಕೈವಶ ವಾಗಿತ್ತು.
ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಈ ವೇಳೆ ಅಪ್ರತಿಮವಾಗಿ ಹೋರಾಡಿದರು ಆದರೆ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು. ಆದಾಗ್ಯೂ, ಹಿಂಜರಿಯದ ಅವರು ವಜಿರಾಲಿ, ಜಸೋರಾನ್ ಮತ್ತು ಬುತೂರ್-ಡೋಗ್ರಾಂಡಿ ಪ್ರದೇಶವನ್ನು ವಶಪಡಿಸಿಕೊಳ್ಳಲು ದಾಳಿಗಳನ್ನು ಯೋಜಿಸಿದರು.13-14 ಸೆಪ್ಟೆಂಬರ್ 1965 ರಂದು, ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಇನ್ನೂ ಗಾಯಗೊಂಡಿದ್ದರೂ ಪೂನಾ ಹಾರ್ಸ್ ಮತ್ತು ಘರ್ವಾಲ್ ಬೆಟಾಲಿಯನ್ಗಳನ್ನು ಮುನ್ನಡೆಸುತ್ತಿದ್ದರು. ವಜಿರಾಲಿಯನ್ನು ಸೆಪ್ಟೆಂಬರ್ 14 ರಂದು ಸೆರೆಹಿಡಿಯಲಾಯಿತು. ಇಷ್ಟಕ್ಕೇ ಸುಮ್ಮನಾಗದ ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಅವರು ಬುತೂರ್ ಮತ್ತು ಡೋಗ್ರಾಂಡಿ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಶತ್ರು ಪಡೆಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಮತ್ತೊಮ್ಮೆ ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಆರು ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಿ ಶೌರ್ಯ ಮೆರೆದರು. ಅವರ ಈ ಅಪ್ರತಿಮ ಹೋರಾಟದಿಂದ ಪ್ರೇರಣೆ ಪಡೆದ ಅವರ ಸಹೋದ್ಯೋಗಿಗಳೂ ಕೂಡ ಪಾಕಿಸ್ತಾನಿ ಪಡೆಗಳ ಮೇಲೆ ಮುಗಿಬಿದ್ದರು. ಅವರ ವೀರೋಚಿತ ಹೋರಾಟ 60 ಪಾಕಿಸ್ತಾನಿ ಟ್ಯಾಂಕುಗಳನ್ನು ನಾಶ ಪಡಿಸಿತ್ತು. ಹೀಗೆ ವೀರಾವೇಶದಿಂದ ತಾರಾಪೋರ್ ಹೋರಾಡುತ್ತಿರುವಾಗಲೇ ಶತ್ರು ಸೈನಿಕರು ಹಾರಿಸಿದ ಶೆಲ್ ಬಾಂಬೊಂದು ಇವರ ಟ್ಯಾಂಕನ್ನು ನಾಶ ಗೊಳಿಸಿತು. ಕದನಕಣದಲ್ಲಿ ಹೋರಾಡುತ್ತಲೇ ಲೆ.ಕರ್ನಲ್ ತಾರಾಪೋರ್ ವೀರಮರಣವನ್ನಪ್ಪಿದರು. ʼಸ್ವಧರ್ಮೇ ನಿಧನಂ ಶ್ರೇಯಃʼ ಅಂದ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್ ಶತ್ರುವಿಗೆ ಎದೆ ಕೊಟ್ಟರೇ ವಿನಃ ಬೆನ್ನು ತೋರಿಸಿ ಓಡಲಿಲ್ಲ. ಅವರ ಈ ಅಪ್ರತಿಮ ಹೋರಾಟದ ಫಲವಾಗಿ ಭಾರತೀಯ ಸೇನೆ 1965ರಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ವಿಜಯ ಸಾಧಿಸಿತು. ಅವರ ಈ ಹೋರಾಟಕ್ಕೆ ಭಾರತೀಯ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರʼಚಕ್ರವನ್ನು ನೀಡಿ ಗೌರವಿಸಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಎ ಬಿ ತಾರಾಪೋರ್ ಅವರ ಅತ್ಯುತ್ತಮ ಧೈರ್ಯ, ನಾಯಕತ್ವ, ಅದಮ್ಯ ಮನೋಭಾವ ಮತ್ತು ಪರಮ ತ್ಯಾಗವನ್ನು ಸ್ಮರಿಸುವುದಕ್ಕಾಗಿಯೇ ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ.