ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ಹಾಸ್ಯನಟ ಚಿಕ್ಕಣ್ಣ ಅವರು ಪೊಲೀಸ್ ಠಾಣೆಗೆ ಹಾಜರಾಗಿದ್ದು, ನಟ ದರ್ಶನ್ ಜತೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದು ನಿಜ ಎಂಬುದಾಗಿ ನಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದರ್ಶನ್ ಕರೆ ಮಾಡಿ ಊಟಕ್ಕೆ ಬರುವಂತೆ ಕರೆದಿದ್ರು. ಒಟ್ಟಿಗೆ ಊಟ ಮಾಡೋಣ ಬಾ ಚಿಕ್ಕಣ್ಣ ಅಂತಾ ಕರೆದಿದ್ರು. ಹಾಗಾಗಿ ಊಟ ಮಾಡಲೆಂದು ನಾನು ಸ್ಟೋನಿ ಬ್ರೂಕ್ ರೆಸ್ಟೊರೆಂಟ್‌ಗೆ ಹೋಗಿದ್ದೆ ಎಂದು ಪೊಲೀಸ್ ಠಾಣೆಗೆ ತೆರಳಿ ತಿಳಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆಗೆ ಮುನ್ನ ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಚಿಕ್ಕಣ್ಣ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದ ಸಂಬಂಧ ಪ್ರತಿಕ್ರಿಯಿಸಿದ ಅವರು, ದರ್ಶನ್ ನಾನು ಗೆಳೆಯರು ಸಾಮಾನ್ಯವಾಗಿ ಹಾಗಾಗ ಊಟಕ್ಕೆ ಸೇರುತ್ತಿದ್ದೆವು. ಅಂದು ಕೂಡ ಊಟಕ್ಕೆ ಕರೆದಿದ್ದರಿಂದ ರೆಸ್ಟೊರೆಂಟ್‌ಗೆ ತೆರಳಿ ದರ್ಶನ್‌ರೊಂದಿಗೆ ಊಟ ಮಾಡಿಕೊಂಡು ಅಲ್ಲಿಂದ ಹೊರಟೆ. ಬಳಿಕ ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯಾಗಲಿ, ಇನ್ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದೇ ನ್ಯೂಸ್ ನಲ್ಲಿ ನೋಡಿದಾಗ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ತನಿಖಾಧಿಕಾರಿಗಳ ಎದುರು ಹಾಸ್ಯ ನಟ ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.