ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡೊರ್ಸಿಗೆ ಕೇಂದ್ರ ಸರ್ಕಾರ ಅವರದ್ದೇ ದಾಟಿಯಲ್ಲಿ ಉತ್ತರ ನೀಡಿದೆ.
ಜಾಕ್ ಡೊರ್ಸಿ ಮಾಡಿದ ಆರೋಪ ಏನು?
ಭಾರತ ಸರ್ಕಾರವನ್ನು ವಿಮರ್ಶಿಸುವ ಟ್ವಿಟರ್ ಹ್ಯಾಂಡಲ್ ಅನ್ನು ನಿಷೇಧಿಸುವಂಥ ಒತ್ತಡ ನನ್ನ ಮೇಲೆ ಹೇರಲಾಗಿತ್ತು. ಅದರಲ್ಲೂ ರೈತರ ಚಳವಳಿಯ ಸಂದರ್ಭದಲ್ಲಿ ಭಾರತ ಸರ್ಕಾರವನ್ನು ಟೀಕಿಸುವ ಟ್ವಿಟರ್ ಹ್ಯಾಂಡಲ್‌ಗಳನ್ನು ನಿರ್ಬಂಧಿಸಲು ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು ಎಂದು ಜಾಕ್ ಡೊರ್ಸಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಜಾಕ್ ಡೊರ್ಸಿ ಟ್ವಿಟರ್ ಮಂಡಳಿಗೆ ರಾಜೀನಾಮೆ ನೀಡಿದ್ದರು. ಆದರೆ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನೀವು ಟ್ವಿಟರ್‌ನ ಸಿಇಒ ಆಗಿದ್ದಾಗ ಯಾವ ವಿದೇಶಿ ಸರ್ಕಾರಗಳಿಂದ ಹೆಚ್ಚು ಒತ್ತಡವನ್ನು ಅನುಭವಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಕ್, ಭಾರತದಲ್ಲಿ ರೈತರ ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರು ಸೇರಿದಂತೆ ಸರ್ಕಾರದ ವಿರುದ್ಧ ಪೋಸ್ಟ್ ಮಾಡುವ ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ತಡೆಯಲು ಹಲವು ಶಿಫಾರಸುಗಳು ಬಂದಿವೆ ಎಂದರು. ಜೊತೆಗೆ ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುವ ಮತ್ತು ನಮ್ಮ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡುವ ಬೆದರಿಕೆಗಳೂ ಬಂದಿದ್ದವು ಎಂಬ ಗಂಭೀರ ಆರೋಪಗಳನ್ನು ಮಾಡಿದರು.
ಡೊರ್ಸಿ ಆರೋಪಕ್ಕೆ ಕೇಂದ್ರ ಸರ್ಕಾರ ತಿರುಗೇಟು
ಟ್ವಿಟರ್‌ನ ಮಾಜಿ ಸಿಇಒ ಡೊರ್ಸಿ ಹೇಳಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ್ದು, ರೈತರ ಕಾನೂನುಗಳ ಮೇಲಿನ ಆಂದೋಲನದ ಸಮಯದಲ್ಲಿ ಭಾರತ ಸರ್ಕಾರದ ಒತ್ತಡವನ್ನು ಎದುರಿಸಿದ್ದೇವೆ ಎಂದು ಹೇಳಿಕೆ ಕೊಟ್ಟಿರುವುದು ʻಹಸಿ ಸುಳ್ಳುʼ ಎಂದು ಕೇಂದ್ರ ತಂತ್ರಜ್ಞಾನ ಮತ್ತು ಮಾಹಿತಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಡೊರ್ಸಿ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಭಾರತೀಯ ಕಾನೂನುಗಳನ್ನು ಕ್ರಮ ತಪ್ಪದೆ ಪಾಲಿಸಬೇಕೆಂದು ಹೇಳಿದ್ದಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿರುವುದಾಗಿಯೂ ಅಲ್ಲದೆ, ಟ್ವಿಟ್ಟರ್ ಬ್ಯಾನ್ ಮಾಡುವಂತಹ ಯಾವುದೇ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೆಲ್ಲಾ ನಿಮ್ಮ ಕಂಪನಿಯ (ಟ್ವಿಟ್ಟರ್) ಸಂಶಯಾಸ್ಪದ ಇತಿಹಾಸವನ್ನು ಮುಚ್ಚಿಡಲು ಮಾಡುತ್ತಿರುವ ನಿಮ್ಮ ಪ್ರಯತ್ನವಾಗಿದೆ ಎಂದು ಕಿಡಿ ಕಾರಿದರು. ಅಲ್ಲದೆ, ಭಾರತದಲ್ಲಿ ಯಾವುದೇ ಟ್ವಿಟರ್ ಕಚೇರಿ ಮೇಲೆ ದಾಳಿ ನಡೆದಿಲ್ಲ, ಯಾವುದನ್ನೂ ಬಂದ್ ಮಾಡಿಲ್ಲ. ಯಾವುದೇ ಟ್ವಿಟರ್ ಉದ್ಯೋಗಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿಲ್ಲ. ಬದಲಾಗಿ, ನಿಮ್ಮ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದೇವೆ ಎಂದರೆ ಅದು ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಂದು ಸ್ಪಷ್ಟಪಡಿಸಿದರು.
ಭಾರತೀಯ ಸಾರ್ವಭೌಮತ್ವ ಕಾಯಿದೆಯನ್ನು ಒಪ್ಪಿಕೊಳ್ಳಲು ನಿಮ್ಮ ಮನಸ್ಸು ಸಿದ್ಧವಿಲ್ಲ. ನಮ್ಮ ಸರ್ಕಾರದ ಕಾನೂನುಗಳು ನಿಮಗೆ ಅನ್ವಯಿಸುವುದಿಲ್ಲ ಎಂಬಂತೆ ನೀವು ವರ್ತಿಸುತ್ತಿದ್ದೀರಿ ಮತ್ತು ಭಾರತದಲ್ಲಿ ಕೆಲಸ ಮಾಡುವ ಎಲ್ಲಾ ಕಂಪನಿಗಳು ಇಲ್ಲಿನ ಕಾನೂನಿನ ಪ್ರಕಾರ ಕೆಲಸ ಮಾಡಬೇಕು. ರೈತರ ಕಾಳಜಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ನೋಟಿಸ್ ಕಳುಹಿಸಿದ್ದರೆ, ಅದು ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಮಾತ್ರ ಎಂದರು.