ಹೊಸದಿಗಂತ, ಬಾಗಲಕೋಟೆ:
ಹೆಲ್ಮೆಟ್ ಕಡ್ಡಾಯ ಇಲ್ಲದ ಸಮಯದಲ್ಲಿ ನಾನು ಹೆಲ್ಮೆಟ್ ಧರಿಸುತ್ತಿದ್ದೆ. ಹೀಗಾಗಿ ಅಂದೊಮ್ಮೆ ನಡೆದ ಅಪಘಾತದಲ್ಲಿ ತಲೆಯೊಂದು ಬಿಟ್ಟು ನನ್ನ ದೇಹದ ಎಲ್ಲಾ ಭಾಗಗಳಿಗೆ ಗಾಯಗಳಾಗಿತ್ತು. ಹೆಲ್ಮೆಟ್ ಯಾವ ರೀತಿಯಲ್ಲಿ ಜೀವರಕ್ಷಕ ಎಂಬುದು ಅರಿವಾಗಿತ್ತು..
ಹೀಗೆಂದು ತಮ್ಮ ಅನುಭವ ಹಂಚಿಕೊಂಡವರು ಶಾಸಕ ಎಚ್.ವೈ.ಮೇಟಿ.
ಅವರು ಇಲ್ಲಿನ ವಿದ್ಯಾಗಿರಿಯ ಕಾಲೇಜು ವೃತ್ತದಲ್ಲಿ ಆಯೋಜಿಸಲಾಗಿದ್ದ 10 ಪೊಲೀಸ್ ದ್ವಿಚಕ್ರ ವಾಹನ ಲೋಕಾರ್ಪಣೆ ಹಾಗೂ ಹೆಲ್ಮೆಟ್ ಕಡ್ಡಾಯ ಅಭಿಯಾನ ಪ್ರಯುಕ್ತ ಉಚಿತ ಹೆಲ್ಮೆಟ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಚಾರ ಕಾನೂನುಗಳು ಕೇವಲ ಪಾಲನೆಗೆ ಮಾತ್ರವಲ್ಲ. ಇತ್ತೀಚೆಗೆ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಹೆಚ್ಚಿನ ಮಂದಿ ತೆಲೆಗೆ ಏಟು ತಗುಲಿ ಸಾವನ್ನಪ್ಪಿರುವುದು ಕಂಡುಬರುತ್ತಿದೆ. ಹೆಲ್ಮೆಟ್ ಬಳಸಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದ ಅವರು, ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್ ಬಳಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಬೇಕೆಂದು ಕಿವಿಮಾತು ಹೇಳಿದರು.
ಸೀಟ್ ಬೆಲ್ಟ್ ಧರಿಸದೇ ತೆರಳುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ತಾನು 25 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂದ ಪ್ರಸಂಗವನ್ನೂ ಅವರು ಈ ಸಂದರ್ಭ ನೆನಪಿಸಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 1.60 ಲಕ್ಷಕ್ಕೂ ಹೆಚ್ಚು ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿಯೇ ವರ್ಷಕ್ಕೆ 1,200-1,500 ವರೆಗೆ ಅಪಘಾತಗಳು ಸಂಭವಿಸುತ್ತಿದೆ. ಅದರಲ್ಲಿ ಕನಿಷ್ಟ 400 ಜನ ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ 300 ಜನ ಹೆಲ್ಮೆಟ್ ಬಳಸದೆ ಇರುವುದು ಕಂಡುಬಂದಿದೆ ಎಂದರು.
ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಹಾಂತೇಶ್ವರ ಜಿಡ್ಡಿ, ಡಿಎಸ್‌ಪಿಗಳಾದ ಪಂಪನಗೌಡ, ಪ್ರಭು ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.