ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ಫ್ಲೆಕ್ಸ್ ವಿಚಾರವಾಗಿ ನಡೆದ ಘರ್ಷಣೆ ಹಾಗೂ ಆಕಸ್ಮಿಕ ಗುಂಡಿನ ದಾಳಿಯಿಂದ ಕಾರ್ಯಕರ್ತನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಚಿವ ಡಾ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. “ಇದು ಯಾವುದೇ ವ್ಯವಸ್ಥಿತ ಹತ್ಯೆಯ ಸಂಚಲ್ಲ, ಬದಲಾಗಿ ಅಚಾತುರ್ಯದಿಂದ ನಡೆದ ದುರ್ಘಟನೆ” ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಫ್ಲೆಕ್ಸ್ ಹತ್ತುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭವಾಗಿ, ಅದು ಹಿಂಸಾಚಾರಕ್ಕೆ ತಿರುಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಶಾಸಕರ ಗನ್‌ಮ್ಯಾನ್ ಮುಂಜಾಗ್ರತಾ ಕ್ರಮವಾಗಿ ಮತ್ತು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಆ ಗುಂಡು ಕಾರ್ಯಕರ್ತನಿಗೆ ತಗುಲಿ ಆತ ಸಾವನ್ನಪ್ಪಿದ್ದಾನೆ ಎಂದು ಸಚಿವರು ವಿವರಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹತ್ಯೆಗೆ ಇದು ಸಂಚು ಎಂಬ ಅಶೋಕ್ ಅವರ ಆರೋಪವನ್ನು ಸುಧಾಕರ್ ತಳ್ಳಿಹಾಕಿದ್ದಾರೆ. ಯಾರನ್ನೂ ಗುರಿಯಾಗಿಸಿ ಅಥವಾ ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.
ಸದ್ಯ ಬಳ್ಳಾರಿಯಲ್ಲಿ ವಾತಾವರಣ ತಿಳಿಯಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. “ಒಂದು ಸಣ್ಣ ಫ್ಲೆಕ್ಸ್ ವಿಚಾರಕ್ಕೆ ಇಷ್ಟೊಂದು ದೊಡ್ಡ ಗಲಾಟೆಯ ಅಗತ್ಯವಿರಲಿಲ್ಲ. ಒಬ್ಬ ಕಾರ್ಯಕರ್ತನ ಸಾವು ಎಲ್ಲರಿಗೂ ತೀವ್ರ ನೋವು ತಂದಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

