ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಬೇರೆ ಜಾಗ ಗುರುತಿಸೋದು ಬೆಟರ್ : ಯದುವೀರ್‌

ಹೊಸದಿಗಂತ ವರದಿ ಮಂಡ್ಯ :

ಪ್ರವಾಸೋಧ್ಯಮ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೃಷ್ಣರಾಜಸಾಗರ ಜಲಾಶಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗೆ ಬೇರೆ ಕಡೆ ಜಾಗ ಗುರುತಿಸುವುದು ಉತ್ತಮ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾಸೀ ಕೇಂದ್ರವಾಗಿ ಕೃಷ್ಣರಾಜಸಾಗರ ಈಗಾಗಲೇ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೆ.ಆರ್.ಎಸ್. ಅಣೆಕಟ್ಟೆ ನಿರ್ಮಾಣಗೊಂಡು 100 ವರ್ಷ ಸಮೀಪಿಸುತ್ತಿರುವುದೆ. ಅಣೆಕಟ್ಟೆ ಭದ್ರತೆ ಸೂಕ್ಷ್ಮ ವಿಚಾರವಾಗಿರುವುದರಿಂದ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಕೆ.ಆರ್.ಎಸ್.ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವಾಗುವುದಕ್ಕೆ ರೈತ ಸಂಘಟನೆಗಳು ಹಾಗೂ ಆ ಭಾಗದ ರೈತರು ವಿರೋಧಿಸುತ್ತಿದ್ದಾರೆಯೇ ಹೊರತು, ಆ ಯೋಜನೆ ಬೇರೆಡೆ ನಿರ್ಮಾಣ ಮಾಡುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ರೈತರಿಂದ ವ್ಯಕ್ತವಾಗುತ್ತಿರುವ ಭಾವನೆಗಳಿಗೆ ಪ್ರಥಮ ಆಧ್ಯತೆ ನೀಡುತ್ತಿದ್ದು, ಈ ಯೋಜನೆಗೆ ನಮ್ಮ ವಿರೋಧವೂ ಇದೆ ಎಂದು ಸ್ಪಷ್ಟಪಡಿಸಿದರು.

ಕಾವೇರಿ ಆರತಿಗೆ 100 ಕೋಟಿ ರೂ. ಖರ್ಚು ಮಾಡುತ್ತಿರುವುದು ಅವೈಜ್ಞಾನಿಕ. ಇಷ್ಟೊಂದು ಹಣವನ್ನು ದುಂದು ವೆಚ್ಚ ಮಾಡುವುದು ಸರಿಯಲ್ಲ, ಬಿಜೆಪಿಯವರಿಗೆ ಇದನ್ನು ವಹಿಸಿಕೊಟ್ಟರೆ ನಾವೇ ಉಚಿತವಾಗಿ ಕಾವೇರಿ ಆರತಿ ಮಾಡುವುದಾಗಿ ತಿರುಗೇಟು ನೀಡಿದರು.

ಕೆ.ಆರ್.ಎಸ್. ಸುತ್ತಮುತ್ತ ಉತ್ತಮವಾದ ಪರಿಸರವಿದೆ. ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಿನಿಂದ ಕೂಡಿದ ಭೂಮಿ ಇದೆ. ಜೀವವೈವಿಧ್ಯ ಸೂಕ್ಷ್ಮ ವಲಯ ಇರುವುದರಿಂದ ಅಲ್ಲಿ ಯೋಜನೆ ಜಾರಿಯಾದರೆ ಪರಿಸರಕ್ಕೆ ದೊಡ್ಡ ಅನಾಹುತವಾಗಲಿದೆ. ಆ ದೃಷ್ಠಿಯಿಂದ ರೈತರು ಮತ್ತು ಸಂಘಟನೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ಪ್ರವಾಸೋಧ್ಯಮ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!