Tuesday, November 18, 2025

ಸಾಲ ಕೊಟ್ರು ಕಷ್ಟಾನೇ: ಹಣ ವಾಪಾಸ್ ಕೇಳಿದಷ್ಟೇ..! ‘ದೃಶ್ಯ’ ಸಿನಿಮಾ ಸ್ಟೈಲ್​ನಲ್ಲಿ ಎಂಜಿನಿಯರ್​ ಮರ್ಡರ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ನಾಪತ್ತೆ ಪ್ರಕರಣ ಇದೀಗ ರೋಮಾಂಚಕಾರಿಯ ಕೊಲೆ ರಹಸ್ಯವಾಗಿ ಬಹಿರಂಗವಾಗಿದೆ. ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಆಂಧ್ರದ ಕುಪ್ಪಂ ಮೂಲದ ಇಂಜಿನಿಯರ್ ಶ್ರೀನಾಥ್ (30) ಅವರನ್ನು ‘ದೃಶ್ಯ’ ಚಿತ್ರದಂತೆಯೇ ಪ್ಲಾನ್ ಮಾಡಿ ಹತ್ಯೆ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದೂರು ದಾಖಲಾಗಿ ತನಿಖೆ ಆರಂಭಿಸಿದ ಅತ್ತಿಬೆಲೆ ಪೊಲೀಸರು, ಆರೋಪಿಗಳ ಮನೆಯಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದ ಮೃತದೇಹವನ್ನು ಪತ್ತೆ ಮಾಡಿದ್ದು, ಪ್ರಕರಣ ಇನ್ನಷ್ಟು ಬೆರಗುಗೊಳಿಸಿದೆ.

ಹಣವನ್ನು ಡಬಲ್ ಮಾಡಿಕೊಡುವ ಹೆಸರಿನಲ್ಲಿ ಪ್ರಭಾಕರ್ ಎಂಬ ವ್ಯಕ್ತಿ ಶ್ರೀನಾಥ್‌ರಿಂದ 40 ಲಕ್ಷ ರೂ. ಪಡೆದಿದ್ದ. ಹಲವು ತಿಂಗಳಾದರೂ ಹಣ ಮರಳಿಸದ ಕಾರಣ, ಶ್ರೀನಾಥ್ ಒತ್ತಾಯಿಸಿದಾಗ ಪ್ರಭಾಕರ್ ತನ್ನ ಸ್ನೇಹಿತ ಜಗದೀಶ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದ. ಹಣ ಕೊಡ್ತೀನಿ ಎಂದು ಕುಪ್ಪಂಗೆ ಬರುವಂತೆ ತಿಳಿಸಿ, ಮನೆಗೆ ಹೋದ ಕೂಡಲೇ ಶ್ರೀನಾಥ್‌ರ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ಹತ್ಯೆಗೈದು, ಅದೆ ಮನೆಯಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು.

ಕುಪ್ಪಂಗೆ ಹೋಗುವ ಮೊದಲು ಪತ್ನಿಗೆ ಮಾಹಿತಿ ನೀಡಿ ತೆರಳಿದ್ದ ಶ್ರೀನಾಥ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಪತ್ನಿ ದೂರು ನೀಡಿದ್ದರು. ವಿಚಾರಣೆ ಸಮಯದಲ್ಲಿ ಏನೂ ಗೊತ್ತಿಲ್ಲವೆಂದು ನಟಿಸಿದ್ದ ಪ್ರಭಾಕರ್, ಪೊಲೀಸರ ಕಠಿಣ ತನಿಖೆಯಲ್ಲಿ ಕೊಲೆ ಮಾಡಿದುದನ್ನು ಒಪ್ಪಿಕೊಂಡಿದ್ದಾನೆ. ನಂತರ ಕುಪ್ಪಂ ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದಿದ್ದಾರೆ.

error: Content is protected !!