ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಸಾರ್ವಜನಿಕವಾಗಿ ಮುಂದಿಟ್ಟಿದ್ದು, ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರತೀಕ್ ಯಾದವ್ ಪತ್ನಿ ಹಾಗೂ ಬಿಜೆಪಿ ನಾಯಕಿ ಅಪರ್ಣಾ ಬಿಷ್ಟ್ ಯಾದವ್ ಕುಟುಂಬದ ಸಂಬಂಧಗಳನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿರುವ ಪ್ರತೀಕ್, ಶೀಘ್ರದಲ್ಲೇ ವಿಚ್ಛೇದನ ಪಡೆಯಲು ಮುಂದಾಗುವುದಾಗಿ ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ದೀರ್ಘ ಪೋಸ್ಟ್‌ನಲ್ಲಿ ಪ್ರತೀಕ್ ಯಾದವ್, ಅಪರ್ಣಾ ಯಾದವ್ ಅವರನ್ನು ಸ್ವಾರ್ಥಿ ಎಂದು ಕರೆದಿದ್ದು, ಖ್ಯಾತಿ ಮತ್ತು ಪ್ರಭಾವವೇ ಅವರ ಪ್ರಮುಖ ಗುರಿಯಾಗಿದೆ ಎಂದು ದೂರಿದ್ದಾರೆ. ಕುಟುಂಬದ ಏಕತೆಯನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ, ತಾನು ಗಂಭೀರ ಮಾನಸಿಕ ಸಂಕಷ್ಟದಲ್ಲಿರುವಾಗಲೂ ಅವಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಹೇಳಿದ್ದಾರೆ. ತಮ್ಮ ವಿವಾಹವನ್ನು ದುರದೃಷ್ಟಕರ ಅನುಭವವೆಂದು ವರ್ಣಿಸಿರುವ ಪ್ರತೀಕ್, ಈ ಸಂಬಂಧವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಪರ್ಣಾ ಯಾದವ್ ಸದ್ಯ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಈ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಸುದ್ದಿಸಂಸ್ಥೆಗಳು ಪ್ರಯತ್ನಿಸಿದರೂ, ಅಪರ್ಣಾ ಯಾದವ್ ಅಥವಾ ಅವರ ಆಪ್ತರು ಪ್ರತಿಕ್ರಿಯೆ ನೀಡಿಲ್ಲ.


