ನಟ ದರ್ಶನ್ ಗೆ ಜೈಲೂಟವೇ ಗತಿ: ಜು.25ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಖೈದಿ ನಟ ದರ್ಶನ್‌ಗೆ ಮನೆ ಊಟ ಕೊಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಜು.25ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರು ನಟ ದರ್ಶನ್‌ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ನಟ ದರ್ಶನ್ ಪರ ವಕೀಲರು 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

ದರ್ಶನ್‌ ಪರ ಮತ್ತು ಪೊಲೀಸರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಜುಲೈ 25 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ವಿಶ್ವನಾಥ್.ಸಿ. ಗೌಡರ್ ಅವರ ಮುಂದೆ ನಟ ದರ್ಶನ್ ಪರ ವಕೀಲ ರಾಘವೇಂದ್ರ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ಜೈಲಿನಲ್ಲಿರುವ ವಿಚಾರಾಣಾಧೀನ ಖೈದಿಗಳು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇದೆ. ಒಂದು ವೇಳೆ ತಮ್ಮ ವ್ಯವಸ್ಥೆ ಮಾಡಿಕೊಳ್ಳಲು ಆಗದಿದ್ದಾಗ ಜೈಲಿನಲ್ಲಿ ಪಡೆಯಲು ಅವಕಾಶ ಇದೆ. ಹೊರಗಿನಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ನೀಡುವ ಅಧಿಕಾರ ಜೈಲು ಐಜಿಪಿಗೆ ನೀಡಲಾಗಿದೆ. ತಮ್ಮ ಸೌಲಭ್ಯಗಳನ್ನು ತಾವು ಪಡೆದುಕೊಳ್ಳಲು ಆಗದೇ ಇದ್ದಾಗ ಮಾತ್ರ ಜೈಲು ಅಥಾರಿಟಿ ನೀಡಬಹುದು ಎಂದು ಕಾನೂನು ಮಾಡಲಾಗಿದೆ ಎಂದು ವಾದ ಮಂಡನೆ ಮಾಡಿದ್ದಾರೆ.

ಜೈಲಿನಲ್ಲಿರುವ ಆರೋಪಿಗೆ ಮನೆಯ ಊಟಕ್ಕೆ ಅವಕಾಶ ನೀಡದೇ ಇರೋದು ಆರ್ಟಿಕಲ್ 21 ಅಡಿ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಂಡಂತೆ ಆಗತ್ತದೆ. ಎಲ್ಲರಿಗೂ ಜೀವಿಸುವ ಹಕ್ಕನ್ನ ಸಂವಿಧಾನ ನೀಡಿದೆ. ದರ್ಶನ್ ಕೇವಲ ಫಿಲ್ಮ್ ಸ್ಟಾರ್ ಅನ್ನೋ ಕಾರಣಕ್ಕೆ ಪ್ರತಿಕೂಲ ಪ್ರಚಾರ ಸಿಗುತ್ತಿದೆ. ಹೀಗಾಗಿ, ಆರೋಪಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ವಕೀಲ ರಾಘವೇಂದ್ರ ಅವರು ವಾದ ಮಂಡಿಸಿದ್ದಾರೆ.

ಪೊಲೀಸರ ಪರ ವಾದ ಏನಿತ್ತು?
ಆಹಾರ ಅಜೀರ್ಣವಾಗುತ್ತಿದೆ. ಪುಡ್ ಪಾಯಿಸನ್ ಆಗಿದೆ, ಭೇದಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಒಂದು ಒಂದು ಬಾರಿಯೂ ಭೇದಿ ಆಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್‌ ಚಿಕಿತ್ಸೆ ಪಡೆದಿಲ್ಲ

ದರ್ಶನ್ ಅವರು ಮುರಿದಿರುವ ಕೈ ಬಗ್ಗೆ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್‌ ಅವರಿಗೆ ಈಗ ವೈರಲ್‌ ಫೀವರ್‌ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ದರ್ಶನ್ ಅವರಿಗೆ ಮೂರು ತಿಂಗಳ ಹಿಂದೆ ಆರ್ಥೋ ಅಪರೇಷನ್ ಆಗಿತ್ತು. ಜೈಲಿನಲ್ಲಿ ಬಂದಾಗ ಅದರ ನೋವು ಪ್ರಾರಂಭವಾಗಿದ್ದು ಇದಕ್ಕೆ ಎಕ್ಸ್ ರೇ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಲ್ಲೂ ಉಲ್ಲೇಖ ಮಾಡಿಲ್ಲ. ಅನಾರೋಗ್ಯದ ವೇಳೆ ವಿಶೇಷ ಕಾಳಜಿ ಆಹಾರ ನೀಡಬೇಕು. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು. ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ.ಆರೋಪಿಗೆ ಭೇದಿ ಆಗುತ್ತಿದ್ದರೆ ಉಪ್ಪು ಖಾರ ಇಲ್ಲದ ಸಾತ್ವಿಕ ಆಹಾರ ನೀಡಬೇಕು. ಕುಡಿಯಲು ಬಿಸಿ ನೀರು ಬೇಕು ಅಂದರೆ ಜ್ವರ ಇದ್ದಾಗ ಮಾತ್ರ ನೀಡ್ತಾರೆ. ಅದನ್ನ ಬಿಟ್ಟು ಪ್ರತಿ ದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ. ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು ಎಂದು ಪೊಲೀಸರು ತಮ್ಮ ವಾದ ಮಂಡಿಸಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!